ಹೆದ್ದಾರಿ ಬದಿ ಮಲಿನ ನೀರು : ಅವೈಜ್ಞಾನಿಕ ಕಾಮಗಾರಿಯಿಂದ ಸೊಳ್ಳೆ ಉತ್ಪಾದನಾ ಕೇಂದ್ರ ಸೃಷ್ಟಿ : ಸಾಂಕ್ರಾಮಿಕ ರೋಗ ಹರಡುವ ಭೀತಿ

road
34ನೇ ನೆಕ್ಕಿಲಾಡಿಯಲ್ಲಿ ರಾ.ಹೆದ್ದಾರಿ ಚತುಷ್ಪಥ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಲಿನ ನೀರು ನಿಂತಿರುವುದು.
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಎಲ್ಲೆಡೆ ಡೆಂಗೆ ಜ್ವರದ ಹಾವಳಿಯ ಭೀತಿ ಕಾಡುತ್ತಿರುವಾಗಲೇ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸರ್ಕಾರ ಜಾಗೃತಿ ಮೂಡಿಸುತ್ತಿದ್ದರೆ, ಇತ್ತ 34ನೇ ನೆಕ್ಕಿಲಾಡಿಯಲ್ಲಿ ಸರ್ಕಾರಿ ಪ್ರಾಯೋಜಿತ ಸೊಳ್ಳೆ ಉತ್ಪಾದನಾ ಕೇಂದ್ರವನ್ನು ರಚಿಸಿದಂತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರ ಅಗಲೀಕರಣ ಕಾಮಗಾರಿಯ ಕಾರಣದಿಂದ ಕೊಳಚೆ ನೀರು ನಿಂತು ಸೊಳ್ಳೆ ಉತ್ಪಾದನಾ ಕೇಂದ್ರ ನಿರ್ಮಾಣವಾಗಿದೆ.

34ನೇ ನೆಕ್ಕಿಲಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಹೆದ್ದಾರಿಗಾಗಿ ಭೂಸ್ವಾಧೀನ ಜಾಗವೊಂದು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಬೃಹತ್ ಕೆರೆಯಂತಾಗಿದೆ. ಈ ಜಾಗ ತಗ್ಗು ಪ್ರದೇಶದಲ್ಲಿದ್ದು, ಅಲ್ಲಿಂದ ನೀರು ಮುಂದಕ್ಕೆ ಹೋಗಲು ಹಾಕಲಾಗಿರುವ ಮೋರಿ ಎತ್ತರದ ಪ್ರದೇಶದಲ್ಲಿದೆ. ಆದ್ದರಿಂದ ಮಳೆಗಾಲದ ಸಂದರ್ಭ ಇಲ್ಲಿ ನೀರು ನಿಲ್ಲುವಂತಾಗಿದೆ. ಈ ನೀರು ಈಗ ಮಲಿನವಾಗಿದ್ದು, ಸುತ್ತಲಿನ ಪ್ರದೇಶದಲ್ಲಿ ವಾಸನೆ ಹರಡುತ್ತಿದೆ. ನಿಂತ ನೀರಿನಲ್ಲಿ ಡೆಂಗೆ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುವ ಸೊಳ್ಳೆಗಳ ಲಾರ್ವಗಳು ಹುಟ್ಟಿಕೊಳ್ಳುತ್ತವೆ ಎಂಬ ಭೀತಿ ಸ್ಥಳೀಯ ನಿವಾಸಿಗರದ್ದು.

ಮನೆಯಂಗಳದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕೆಂದು ನಿರ್ದೇಶನ ನೀಡುವ ಸರ್ಕಾರ ಇಡೀ ಗ್ರಾಮಕ್ಕೆ ರೋಗಾಣುಗಳನ್ನು ಸರಬರಾಜು ಮಾಡುವ ರೀತಿಯಲ್ಲಿ ನೀರು ನಿಂತಿರುವುದಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ. ಮಳೆಗಾಲದ ಕಾರಣಕ್ಕೆ ಹೆದ್ದಾರಿ ಕಾಮಗಾರಿ ನಡೆಯುತ್ತಿಲ್ಲ. ಆದರೆ ಇದೇ ಕಾರಣಕ್ಕೆ ಅನಾರೋಗ್ಯ ಮೂಡಿಸುವ ಸ್ಥಿತಿ ನಿರ್ಮಿಸುವುದು ಸರಿಯೇ? ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕಲ್ಲವೆ ? ಎಂಬಿತ್ಯಾದಿ ಪ್ರಶ್ನೆಗಳು ಸ್ಥಳೀಯರಿಂದ ಕೇಳಿ ಬರುತ್ತಿದೆ. ಹೆದ್ದಾರಿ ಪಾರ್ಶ್ವದಲ್ಲಿಯೇ ಈ ಸೊಳ್ಳೆ ಉತ್ಪಾದನಾ ಕೇಂದ್ರ ಇದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ವಿಸ್ಮಯ ತಂದಿದೆ.

ಸತತ ಮನವಿ ಸಲ್ಲಿಕೆ

ಇದು ರಾಷ್ಟ್ರೀಯ ಹೆದ್ದಾರಿಗಾಗಿ ಭೂ ಸ್ವಾಧೀನಗೊಂಡ ಜಾಗ. ತಗ್ಗು ಪ್ರದೇಶದಲ್ಲಿದೆ. ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ. ಸ್ಥಳೀಯ ಭೌಗೋಳಿಕ ಏರುತಗ್ಗುಗಳ ಬಗ್ಗೆ ಗಮನಿಸದೆ ನಡೆದ ಕಾಮಗಾರಿಯ ಫಲ ಇದು. ಈಗ ಒತ್ತಾಯಿಸಿದಾಗಲೆಲ್ಲಾ ಮಳೆಗಾಲ ಮುಗಿದ ಬಳಿಕವೇ ಕಾಮಗಾರಿ ನಡೆಸಬೇಕಾಗುತ್ತದೆ ಎನ್ನುತ್ತಾರೆ. ಚರಂಡಿ ಭಾಗದಲ್ಲಿ ವಿದ್ಯುತ್ ಕಂಬ ಅಳವಡಿಸಲಾಗಿದೆ. ಸತತ ಒತ್ತಾಯದ ಬಳಿಕ ಮೋರಿ ನಿರ್ಮಿಸಿದರೂ ಅದು ಎತ್ತರದಲ್ಲಿದೆ. ಇದರಿಂದಾಗಿ ಕೊಳಚೆ ನೀರು ಇಲ್ಲಿ ಸಂಗ್ರಹವಾಗುತ್ತಿದೆ. ಜಿಲ್ಲಾಡಳಿತ ವಿಶೇಷವಾಗಿ ಗಮನಹರಿಸಬೇಕಾದ ಅನಿವಾರ್ಯತೆ ಇದೆ ಎಂದು ನೆಕ್ಕಿಲಾಡಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಶಾಂತ್ ಶಿವಾಜಿನಗರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net