ಪುತ್ತೂರಿನಲ್ಲಿ ಪ್ರವಹಿಸಿದ ರಾಷ್ಟ್ರಭಕ್ತಿಯ ಧಾರೆ - ಮಾದರಿಯಾದ ಕಾರ್ಗಿಲ್ ವಿಜಯೋತ್ಸವ ಬೆಳ್ಳಿಹಬ್ಬ - ಜಡಿಮಳೆ ಲೆಕ್ಕಿಸದೆ ಭವ್ಯ ಮೆರವಣಿಗೆ - ಯೋಧರನ್ನು ಕಂಡು ಧನ್ಯರಾದ ಜನ

PTR_20 JUL_2
Published on

ಪುತ್ತೂರು: ಕಾರ್ಗಿಲ್ ವಿಜಯೋತ್ಸವಕ್ಕೆ ಇಪ್ಪತ್ತೈದು ವರ್ಷ ತುಂಬಿದ್ದಕ್ಕೆ ಸಂಭ್ರಮ. ಧರ್ಮದ ಲೇಪನವಿರಲಿಲ್ಲ, ರಾಜಕೀಯದ ವಾಸನೆ ಬರಲಿಲ್ಲ, ಸ್ವಾರ್ಥದ ಬಯಕೆ ಕಾಣಿಸಲಿಲ್ಲ. ಕೇವಲ ರಾಷ್ಟ್ರಭಕ್ತಿ, ದೇಶಕ್ಕಾಗಿ ಬದುಕನ್ನು ಮುಡಿಪಾಗಿಟ್ಟವರನ್ನು ಗೌರವಿಸುವ ಭಾವವಷ್ಟೇ ವಿರಾಜಿಸುತ್ತಿತ್ತು. ಊರಿಗೆ ಊರೇ ಸೇರಿ ಸಂಭ್ರಮಿಸಿದ ಕ್ಷಣವದು.


ಪುತ್ತೂರಿನಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದು ನಟ್ಟೋಜ ಫೌಂಡೇಷನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು. ಪುತ್ತೂರಿನ ಮಾಜಿ ಸೈನಿಕರ ಸಂಘ, ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಹೆಗಲೆಣೆಯಾಗಿ ಜತೆ ಸೇರಿದ್ದವು.


ಗಮನಸೆಳೆದದ್ದು ಭವ್ಯ ಮೆರವಣಿಗೆ. ಭಾರತ ಮಾತೆಗೆ, ವೀರ ಸೈನಿಕರಿಗೆ ಜಯಘೋಷದ ಸಹಿತ ಅಂಬಿಕಾದ ಸಹಸ್ರ ವಿದ್ಯಾರ್ಥಿಗಳು, ಜತೆಗೆ ಪುತ್ತೂರಿನ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಬೆಂಬಲವಾಗಿದ್ದರು.
ಕಾರ್ಗಿಲ್ ಕದನದ ಇಬ್ಬರು ಮಹಾಯೋಧರನ್ನು ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಮಾಡಿ ಸೈನಿಕರೇ ನಮ್ಮ ಆದರ್ಶ ಎಂಬ ಸಂದೇಶವನ್ನು ಸಾರಲಾಯಿತು. ಎಲ್ಲ ಪಕ್ಷೀಯರೂ ವೀರ ಯೋಧರಿಗೆ ಹಾರಾರ್ಪಣೆ ಮಾಡಿ ಪುತ್ತೂರಿನ ಗೌರವವನ್ನು ಹೆಚ್ಚಿಸಿದರು.


ಸೈನ್ಯದ ಅತ್ಯುಚ್ಚ ಪ್ರಶಸ್ತಿ ಪರಮವೀರ ಚಕ್ರ ಪಡೆದ ಕ್ಯಾ.ಯೋಗೀಂದ್ರ ಸಿಂಗ್ ಯಾದವ್, ಸೇನಾಪದಕ ಪುರಸ್ಕೃತ ಕ್ಯಾ. ನವೀನ್ ನಾಗಪ್ಪ ಪುತ್ತೂರಿನಾದ್ಯಂತ ಹೀರೋಗಳಾಗಿ ಮಿಂಚಿದರು. ’ಕಾರ್ಗಿಲ್ ಕದನದ ನಂತರ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಆದರೆ ಇಂಥಹದ್ದೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ ಇಪ್ಪತ್ತೈದು ವರ್ಷ ಕಾಯಬೇಕಾಗಿ ಬಂತು. ನನಗಿನ್ನೇನೂ ಬೇಡ. ಸಾಕು ಈ ಪ್ರೀತಿಯೊಂದೇ. ದೇಶಕ್ಕಾಗಿ ಈ ಬದುಕು ಮೀಸಲಾದದ್ದು ಸಾರ್ಥಕವಾಯಿತು’ ಎಂದು ಕ್ಯಾಪ್ಟನ್ ನವೀನ್ ನಾಗಪ್ಪ ಭಾವಪರವಶರಾದರು.


ಒಟ್ಟಿನಲ್ಲಿ ಇಂತಹ ಕಾರ್ಯಕ್ರಮವೊಂದನ್ನು ಆಯೋಜಿಸಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ ಮಾದರಿಯೆನಿಸಿತು. ಸ್ವಾಗತ ಭಾಷಣದಲ್ಲಿ ಯೋಧರನ್ನು ನೆನೆಯುತ್ತಾ ಕಣ್ಣೀರ್ಗರೆದ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಜನರ ಮನಗೆದ್ದರು.


ವಿದ್ಯಾರ್ಥಿಗಳ ದೇಶ ಭಕ್ತಿಯ ಉತ್ತರ
ಸೈನಿಕರು ನಿತ್ಯ ಗಡಿಯಲ್ಲಿ ಘೋರ ಚಳಿ ಮಳೆ ಅನುಭವಿಸುವಾಗ ನಾವೊಂದು ದಿನ ಒದ್ದೆಯಾದರೆ ಅಡ್ಡಿಯಿಲ್ಲ ಎಂಬ ಭಾವ ಕೈಯಲ್ಲಿ ಛತ್ರಿಯಿದ್ದರೂ ಬಿಡಿಸದೆ ಮೆರವಣಿಗೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಲ್ಲಿ ಕಾಣುತ್ತಿತ್ತು. ಈ ಬಗ್ಗೆ ಪ್ರಶ್ನಿಸಿದ ಕೆಲವು ಸಾರ್ವಜನಿಕರಿಗೆ ದೇಶಕ್ಕಾಗಿ ಮಳೆಯಲ್ಲಿ ನೆನೆಯಲು ಸಿದ್ಧರಿದ್ದೇವೆ ಎಂಬ ದೇಶಪ್ರೇಮದ ಉತ್ತರವನ್ನು ವಿದ್ಯಾರ್ಥಿಗಳು ನೀಡಿದ್ದಾರೆ.


ಪರಮವೀರಚಕ್ರ ಪ್ರಶಸ್ತಿ ಪಡೆದ ಕ್ಯಾ. ಯೋಗೀಂದ್ರ ಯಾದವ್ ಅವರನ್ನು ಪುತ್ತೂರಿಗರು ಕಾಣುವ ಸೌಭಾಗ್ಯವನ್ನು ಅಂಬಿಕಾ ವಿದ್ಯಾಸಂಸ್ಥೆ ಒದಗಿಸಿದೆ. ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಳೆಯಲ್ಲೂ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮದ ಯಶಸ್ಸನ್ನು ಸಹಿಸದ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರದಲ್ಲಿ ತೊಡಗಿರುವುದು ಖಂಡನೀಯ. ಇಬ್ಬರು ವೀರಪುರುಷರ ಭಾಷಣ ಕೇಳಿ ಸಾವಿರಾರು ವಿದ್ಯಾರ್ಥಿಗಳು ಪ್ರೇರೇಪಣೆಗೊಂಡಿದ್ದಾರೆ.
| ಡಿ. ಚಂದಪ್ಪ ಮೂಲ್ಯ ಉಪ್ಪಿನಂಗಡಿ ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಬಿಎಸ್‌ಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net