ಬಗೆಹರಿಯದ ದಶಕಗಳ ಬೇಡಿಕೆ

ಬಗೆಹರಿಯದ ದಶಕಗಳ ಬೇಡಿಕೆ
Published on

ಹಿರಿಕರ ರವಿ ಸೋಮವಾರಪೇಟೆ
ಪಟ್ಟಣಕ್ಕೆ ಸಮೀಪದ ಕಾಗಡಿಕಟ್ಟೆ ಅಯ್ಯಪ್ಪ ಕಾಲನಿಯ ನಿವಾಸಿಗಳ ಹಕ್ಕುಪತ್ರ, ರಸ್ತೆ ಅಭಿವೃದ್ಧಿಯ ಕೂಗು ಅರಣ್ಯರೋಧನವಾಗಿದೆ.
ಮಳೆಗಾಲದಲ್ಲಿ ಗುಂಡಿಬಿದ್ದ ರಸ್ತೆಗಳಲ್ಲಿ ಬಾಳೆಗಿಡಗಳನ್ನು ನೆಟ್ಟರೆ ಸಮೃದ್ಧವಾಗಿ ಬೆಳೆದು ಉತ್ತಮ ಫಸಲಾದರೂ ಸಿಗುತ್ತದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಮನೆಯಂಗಳದಲ್ಲಿ ಸಂಗ್ರಹವಾಗಿ ನಡೆದಾಡಲು ಕಷ್ಟವಾಗುತ್ತದೆ.

ಕಾಲನಿಯ ಮೇಲ್ಭಾಗದ ಮೈದಾನದ ಪಕ್ಕ, ಏಳುಮಲೈ ಅವರ ಮನೆಯ ಪಕ್ಕದಲ್ಲಿ ಹಾದುಹೋಗುವ ರಸ್ತೆಯಲ್ಲಿ ಕಾಡಾನೆಗಳು ಕೂಡ ಸಂಚರಿಸಲು ಭಯಪಡುತ್ತವೆ. ಕಳೆದ 5 ದಶಕಗಳಿಂದಲೂ ರಸ್ತೆಯಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.

ಅಂಗವಿಲಕ ಸೈಯದ್ ಹಾಗು ಬಾಲನ್ ಅವರ ಮನೆಯ ಪಕ್ಕದಲ್ಲಿ ಬರೆ ಕುಸಿಯುವ ಹಂತದಲ್ಲಿದೆ. ಎರಡು ಕುಟುಂಬಗಳು ಕೂಲಿ ಮಾಡಿ ಬದುಕು ಕಟ್ಟಿಕೊಳ್ಳಬೇಕು. ಮಳೆಗಾಲದಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಹಸನಬ್ಬ ಅವರ ಮನೆಯಿಂದ ಅಂಗನವಾಡಿ ತನಕ ರಸ್ತೆ ಕಾಮಗಾರಿಯಾಗಬೇಕು. ಅಯ್ಯಪ್ಪ ಕಾಲನಿಯಲ್ಲಿ 128 ಕುಟುಂಬಗಳು ವಾಸಿಸುತ್ತಿದ್ದು, 520ರಷ್ಟು ಜನಸಂಖ್ಯೆಯಿದೆ. ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಹಿಂದುಳಿದಿದ್ದಾರೆ. ಚುನಾವಣೆ ಸಂದರ್ಭ ಮಾತ್ರ ರಾಜಕೀಯ ಮುಖಂಡರು ಕಾಲನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಭರವಸೆಗಳನ್ನು ಕೊಟ್ಟು, ಮತ ಪಡೆದು ನಾಪತ್ತೆಯಾಗುತ್ತಾರೆ ಎಂದು ನಿವಾಸಿಗಳು ದೂರಿದ್ದಾರೆ.

ಕಾಲನಿಯ ಹೆಚ್ಚಿನ ಭಾಗಗಳಲ್ಲಿ ಚರಂಡಿಗಳಿಲ್ಲ. ಇದ್ದ ಚರಂಡಿಗಳಲ್ಲಿ ಕಸ ಕಡ್ಡಿಗಳು ಮತ್ತು ಪ್ಲಾಸ್ಟಿಕ್ ಸಾಮಗ್ರಿಗಳು ಸಂಗ್ರಹವಾಗಿ ಸೊಳ್ಳೆಗಳ ಕೇಂದ್ರವಾಗಿ ಮಾರ್ಪಟ್ಟಿದೆ.

ಕಳೆದ 50 ವರ್ಷಗಳಿಂದ ಕಾಲನಿಯ ಬಹುತೇಕ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಇದರಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಹಕ್ಕುಪತ್ರ ಕೊಡಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಿವಾಸಿ ನಂಜಪ್ಪ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net