

ಕಂಪ್ಲಿ: ತಾಲೂಕಿನ ಹತ್ತು ಗ್ರಾಪಂಗಳು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿದ್ದರೂ ಜನತೆ ಬಯಲು ಬಹಿರ್ದೆಸೆಯಿಂದ ಇನ್ನೂ ಮುಕ್ತರಾಗಲಿಲ್ಲ. ಬಯಲು ಶೌಚಕ್ಕೆ ಬಾರದಂತೆ ಎಚ್ಚರಿಸಲು ಗ್ರಾಮಾಡಳಿತ ಊದಿದ ವಿಜಿಲ್ ಸದ್ದು ಬಹಿರ್ದೆಸೆಗೆಂದು ಬಯಲಿಗೆ ಬರುವವರ ಕಿವಿಗೆ ಬೀಳುತ್ತಿಲ್ಲ.
ಪಿಡಿಒ ಸೇರಿ ಅಧಿಕಾರಿಗಳು ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರೂ ತಾಂತ್ರಿಕ ಕಾರಣಗಳಿಂದ ಪೂರ್ಣ ಗುರಿ ಸಾಧಿಸಲಾಗುತ್ತಿಲ್ಲ. ನಾನಾ ಕಾರಣಗಳಿಂದ ಜನತೆ ಇನ್ನು ಸಾರ್ವಜನಿಕ ಶೌಚಗೃಹ, ಸಾಮುದಾಯಿಕ ಶೌಚಗೃಹ ನಿರ್ಮಿಸಿಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಮನೆಯ ವೈಯಕ್ತಿಕ ಶೌಚಗೃಹವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಬಯಲು ಶೌಚವನ್ನೇ ಆಶ್ರಯಿಸಿದ ಕೆಲ ಕುಟುಂಬಗಳು ಇವೆ.
ತಾಲೂಕಿನಾದ್ಯಂತ ಸಾರ್ವಜನಿಕ, ಸಾಮೂಹಿಕ ಶೌಚಗೃಹ ಬೇಕೆನ್ನುವ ಕೂಗು ಅರಿತ ಶಾಸಕ ಜೆ.ಎನ್.ಗಣೇಶ್ ಇದೇ ಜುಲೈ ಅಧಿವೇಶನದಲ್ಲಿ, ಜನತೆ ಇನ್ನು ಬಯಲು ಬಹಿರ್ದೆಸೆಗೆ ತೆರಳುತ್ತಿದ್ದು, ಕ್ಷೇತ್ರದಲ್ಲಿ ನಿರ್ಮಿಸಿದ ಶೌಚಗೃಹಗಳ ಸಂಖ್ಯೆ, ನಿರ್ಮಿಸಬೇಕಾದ ಸಾಮೂಹಿಕ ಶೌಚಗೃಹಗಳ ಸಂಖ್ಯೆ, ಬಯಲು ಬಹಿರ್ದೆಸೆ ಮುಕ್ತ ಕ್ಷೇತ್ರಕ್ಕೆ ಸರ್ಕಾರದ ಕ್ರಮ ಕುರಿತು ಶಾಸಕರು ಪ್ರಶ್ನಿಸಿದ್ದರು.
ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಶೌಚಗೃಹ ನಿರ್ಮಿಸಲು ಸ್ಥಳದ ಅಭಾವ ಇರುವ ಕುಟುಂಬಗಳಿಗೆ, ಜನನಿಬಿಡ ಪ್ರದೇಶಗಳಲ್ಲಿ ಸಮುದಾಯ/ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುತ್ತಿದೆ. ಐದು ಸಮುದಾಯ ಶೌಚಗೃಹ ನಿರ್ಮಿಸಲಾಗಿದೆ. ಪ್ರಸ್ತುತ 21 ಸಮುದಾಯ/ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸಲು ಅವಶ್ಯಕವಿದೆ. ಕ್ಷೇತ್ರದಲ್ಲಿ ಈತನಕ 40,734 ವೈಯಕ್ತಿಕ ಗೃಹ ಶೌಚಗೃಹ ನಿರ್ಮಿಸಿದೆ.
ಇನ್ನು 1914 ಕುಟುಂಬಗಳಿಗೆ ವೈಯಕ್ತಿಕ ಗೃಹ ಶೌಚಗೃಹ ನಿರ್ಮಾಣಕ್ಕೆ ಯೋಜನೆಯ ಆನ್‌ಲೈನ್ ಸಿಟಿಜನ್ ಆಫ್ ಮೂಲಕ ಅರ್ಜಿಗಳಿದ್ದು, ಪಿಡಿಒಗಳು ಪರಿಶೀಲಿಸಿ ಅರ್ಹ ಕುಟುಂಬಗಳಿಗೆ ಶೌಚಗೃಹ ನಿರ್ಮಾಣಕ್ಕೆ ಕ್ರಮವಹಿಸಲಾಗುತ್ತಿದೆ. ಎಲ್ಲಾ ಕುಟುಂಬಗಳಿಗೆ ಶೌಚಗೃಹ ಒದಗಿಸಿ ಕ್ಷೇತ್ರವನ್ನು ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ಉತ್ತರಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು ಸಿಟಿಜನ್ ಆಪ್ ಮೂಲಕ 741ಫಲಾನುಭವಿಗಳು ದಾಖಲಿಸಿದ್ದು ಇದರಲ್ಲಿ 377ಫಲಾನುಭವಿಗಳ ದಾಖಲೆಗಳಿಗೆ ತಾಪಂ ಮಂಜೂರು ನೀಡಿದ್ದು, 186ಕ್ಕೆ ಕಾರ್ಯಾದೇಶ ನೀಡಿದ್ದು, ನೆಲ್ಲೂಡಿ ಗ್ರಾಪಂ.ನ 12, ಎಮ್ಮಿಗನೂರು 11, ರಾಮಸಾಗರ 1, ನಂ.ಮುದ್ದಾಪುರ 27, ಸಣಾಪುರ 40, ದೇವಸಮುದ್ರ 23, ಹಂಪಾದೇವನಹಳ್ಳಿ 40, ಸುಗ್ಗೇನಹಳ್ಳಿ 18, ಮೆಟ್ರಿ 3, ದೇವಲಾಪುರ 11 ಸೇರಿವೆ.
ಕೆಲವೆಡೆ ವೈಯಕ್ತಿಕ ಶೌಚಗೃಹಗಳಿದ್ದರೂ ನಿಗದಿತ ಉದ್ದೇಶಕ್ಕೆ ಬಳಸದೆ ಅವುಗಳನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿದ್ದಾರೆ. ಕೆಲವರು ಕಟ್ಟಿಗೆ, ಕುಳ್ಳು, ವ್ಯರ್ಥ ಸಾಮಾನು ಹಾಕಿಕೊಂಡಿದ್ದಾರೆ. ಕೆಲವರು ಕುಣಿ ತುಂಬಿದೆ ಎಂದೋ ಇತರ ತಾಂತ್ರಿಕ ಕಾರಣಗಳಿಗೆ ಬಳಸದೆ ಬಯಲನ್ನೇ ಶೌಚಕ್ಕಾಗಿ ಆಶ್ರಯಿಸಿದವರಿದ್ದಾರೆ. ಇಂತಹವರಿಗೆ ಗ್ರಾಮಾಡಳಿತ ಅರಿವು ಮೂಡಿಸುವ ಕಾರ್ಯಕ್ರಮ ಹಾಕಿಕೊಳ್ಳುವ ಅಗತ್ಯತೆ ಇದೆ.
ತಾಲೂಕಿನಲ್ಲಿ ಒಟ್ಟು 17,293 ಕುಟುಂಬಗಳು ಶೌಚಗೃಹಗಳನ್ನು ಹೊಂದಿದ್ದು, 11ಸಮುದಾಯ ಶೌಚಾಲಯಗಳಿಗೆ ಬೇಡಿಕೆಯಿದೆ. ಹೊಸ ಶೌಚಗೃಹಗಳ ನಿರ್ಮಾಣಕ್ಕೆ 741ಅರ್ಜಿಗಳು ಬಂದಿದ್ದು ಇದರಲ್ಲಿ 142ಕಾಮಗಾರಿಗಳಿಗೆ ಆದೇಶ ನೀಡಿದೆ. 599ಶೌಚಗೃಹಗಳು ಬಾಕಿ ಇವೆ. ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳುವಂತೆ, ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕ್ರಮ ಪ್ರಗತಿಯಲ್ಲಿದೆ. ಬೆಳೆಯುತ್ತಿರುವ ಜನಸಂಖ್ಯೆ, ನಿವಾಸಗಳ ನಿರ್ಮಾಣಕ್ಕೆ ತಕ್ಕಂತೆ ವೈಯಕ್ತಿಕ ಶೌಚಗೃಹ ನಿರ್ಮಿಸಬೇಕಿದೆ. ಗ್ರಾಮಗಳಲ್ಲಿ ಸಮುದಾಯ ಶೌಚಗೃಹ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿದೆ.
ಆರ್.ಕೆ.ಶ್ರೀಕುಮಾರ್
ತಾಪಂ ಇಒ, ಕಂಪ್ಲಿ
ಜಾತ್ರೆ, ಸಮಾರಂಭ, ಮನೆಯಲ್ಲಿನ ಕಾರ್ಯಕ್ರಮಗಳ ಸಂದರ್ಭದಲ್ಲಿ ಮನೆಗೆ ಬೀಗರು, ಆಪ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದುಂಟು. ಆಗ ವೈಯಕ್ತಿಕ ಶೌಚಗೃಹ ಬಳಕೆಗೆ ತೊಡಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅನುಕೂಲಕ್ಕಾಗಿ ಕನಿಷ್ಟ ಗ್ರಾಮಕ್ಕೆ ಒಂದೆರೆಡಾದರೂ ಸುಧಾರಿತ ಸಮುದಾಯಿಕ, ಸಾರ್ವಜನಿಕ ಶೌಚಗೃಹಗಳು ಬೇಕು. ಜನತೆ ಕಡ್ಡಾಯವಾಗಿ ವೈಯಕ್ತಿಕ ಶೌಚಗೃಹ ಬಳಸಲು ಮುಂದಾಗಬೇಕು.
ಜೆ.ಎನ್.ಗಣೇಶ್
ಶಾಸಕರು, ಕಂಪ್ಲಿ.