More

    ಶಾಲಾ ಶೌಚಗೃಹ, ಬೀದಿದೀಪ ದುರಸ್ತಿಗೆ ಉಳಾಯಿಬೆಟ್ಟು ಪಂಚಾಯಿತಿ ಗ್ರಾಮಸಭೆಯಲ್ಲಿ ಒತ್ತಾಯ

    ವಿಜಯವಾಣಿ ಸುದ್ದಿಜಾಲ ಗುರುಪುರ
    ಉಳಾಯಿಬೆಟ್ಟು ಪಂಚಾಯಿತಿಯ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಪಂಚಾಯಿತಿಯಲ್ಲಿ ಅಧ್ಯಕ್ಷ ಹರಿಕೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದಿದ್ದು ವಿವಿಧ ಅಹವಾಲು ಈವೇಳೆ ಕೇಳಿಬಂತು.
    ಉಳಾಯಿಬೆಟ್ಟಿನ ಹಳೆಯ ಸರ್ಕಾರಿ ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ಶಾಲಾ ಶೌಚಗೃಹ ಸೋರುತ್ತಿದೆ. ಹಿಂದಿನ ಮೂರು ಗ್ರಾಮಸಭೆಗಳಲ್ಲಿ ಈ ಬಗ್ಗೆ ದೂರು ನೀಡಲಾಗಿದ್ದರೂ ಈವರೆಗೆ ದುರಸ್ತಿ ನಡೆದಿಲ್ಲ. ವಿದ್ಯಾರ್ಥಿಗಳು ಮಳೆ ನೀರಿಗೆ ಒದ್ದೆಯಾಗಿ ಪಾಠ ಕೇಳುವ ಸ್ಥಿತಿ ಇದೆ. ತುರ್ತಾಗಿ ದುರಸ್ತಿ ಆಗಬೇಕು. ಮಳೆಗಾಲ ಮುಗಿದ ಬಳಿಕ ಎಲ್ಲವೂ ಸರಿ ಇರುತ್ತದೆ ಎಂದು ಇಸ್ಮಾಯಿಲ್ ಮತ್ತು ಮನ್ಸೂರ್ ಹೇಳಿದರು.
    ಶಿಕ್ಷಣ ಇಲಾಖೆ ಸಂಯೋಜನಾಧಿಕಾರಿ ವಿಶ್ವನಾಥ್ ಉತ್ತರಿಸಿ, ಈ ವಿಷಯ ಜಿಪಂ ಗಮನಕ್ಕೆ ತಂದು ಈ ಮಳೆಗಾಲದಲ್ಲೇ ಶಾಲಾ ಶೌಚಗೃಹ ದುರಸ್ತಿಗೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

    ಸದಸ್ಯರಿಂದ ಜನಸ್ಪಂದನೆ ಇಲ್ಲ

    ವಾರ್ಡ್ ನಂಬ್ರ 2ರ ಕಾಂತಾರಬೆಟ್ಟುವಿನಲ್ಲಿ ಕಳೆದ ನಾಲ್ಕು ತಿಂಗಳಿಂದ ದಾರಿದೀಪ ಕೆಟ್ಟು ಹೋಗಿದೆ. ಪಂಚಾಯಿತಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ನಮ್ಮ ವಾರ್ಡ್‌ನ ಸದಸ್ಯರಿಂದ ಜನಸ್ಪಂದನೆಯ ಕೆಲಸಗಳು ನಡೆಯುತ್ತಿಲ್ಲ. ದಾರಿದೀಪ, ರಸ್ತೆ, ಶಾಲಾ ಸ್ಥಿತಿ ಉತ್ತಮವಾಗಿರದಿದ್ದರೂ, ‘ಉಳಾಯಿಬೆಟ್ಟುವನ್ನು ಮಾದರಿ ಪಂಚಾಯಿತಿ ಮಾಡುತ್ತೇವೆ’ ಎಂದು ಅಧ್ಯಕ್ಷರು ಹೇಳುತ್ತಿದ್ದಾರೆ ಎಂದು ಲತೀಫ್ ಆಕ್ಷೇಪಿಸಿದರು. ಇದಕ್ಕೆ ಹಲವರು ಧ್ವನಿಗೂಡಿಸಿ, ‘ದಾರಿದೀಪ ಯಾವಾಗ ಅಳವಡಿಸುತ್ತೀರಿ? ಸ್ಪಷ್ಟ ಭರವಸೆ ನೀಡಿ’ ಎಂದು ಆಗ್ರಹಿಸಿದರು. ಇನ್ನೊಂದು ವಾರದಲ್ಲಿ ದಾರಿದೀಪಗಳು ಉರಿಯಲಿವೆ. ವಾರ್ಡ್ ಸದಸ್ಯರು ಅದರ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಮಳೆಗಾಲದಲ್ಲಿ ದಾರಿದೀಪಗಳು ಕೆಟ್ಟು ಹೋಗುವುದು ಸಾಮಾನ್ಯ ಎಂದು ಅಧ್ಯಕ್ಷ ಹರಿಕೇಶ್ ಶೆಟ್ಟಿ ಹೇಳಿದರು.

    ಡೆಂಘೆ ಬಗ್ಗೆ ಎಚ್ಚರ

    ಮಂಗಳೂರು ನಗರದಲ್ಲಿ ಈಗ ಡೆಂಘೆ ಜ್ವರ ವ್ಯಾಪಕಗೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಜನರು ಹೆಚ್ಚು ಜಾಗೃತರಾಗಬೇಕು. ಮೂರಕ್ಕಿಂತ ಹೆಚ್ಚು ದಿನ ಜ್ವರ ಬಾಧಿಸಿದರೆ ತಕ್ಷಣ ವೈದ್ಯರನ್ನು ಕಂಡು ರಕ್ತ ಪರೀಕ್ಷೆ ಮಾಡಿಕೊಳ್ಳಬೇಕು. ಔಷಧ ಪಡೆಯುವಲ್ಲಿ ವಿಳಂಬವಾಗಬಾರದು. ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇರಿಸಬೇಕು ಎಂದು ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿರಾಗ್ ಸೂಚಿಸಿದರು.

    ತೆರಿಗೆ ವಸೂಲಿ ತೊಡಕು

    ವಾರ್ಷಿಕ ನೀರು ಮತ್ತು ಮನೆ ತೆರಿಗೆ ವಸೂಲಿ ಬಗ್ಗೆ ಮಾಹಿತಿ ಕೇಳಿದ ರಾಜೀವ ಶೆಟ್ಟಿ ಸಲ್ಲಾಜೆ, ಪಂಚಾಯಿತಿ ಆಡಳಿತದಿಂದ ಸಮಯೋಚಿತವಾಗಿ ತೆರಿಗೆ ವಸೂಲಿ ನಡೆಯುತ್ತಿಲ್ಲ ಎಂದು ಆಕ್ಷೇಪಿಸಿದರು. ಕಳೆದ ಒಂದು ವರ್ಷದಲ್ಲಿ 5.48 ಲಕ್ಷ ರೂ. ನೀರು ತೆರಿಗೆ ಬಾಕಿಯಾಗಿದ್ದು, ಪ್ರಸಕ್ತ 6 ತಿಂಗಳಲ್ಲಿ ಅವಧಿಯಲ್ಲಿ 1.95 ಲಕ್ಷ ರೂ. ವಸೂಲಿಯಾಗಿದೆ. 11.44 ಲಕ್ಷ ರೂ ಮನೆ ತೆರಿಗೆ ಬಾಕಿಯಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 6 ಲಕ್ಷ ರೂ. ವಸೂಲಿಯಾಗಿದೆ. ತೆರಿಗೆ ವಸೂಲಿಗೆ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಪಿಡಿಒ ಅನಿತಾ ಕ್ಯಾಥರಿನ್ ಮಾಹಿತಿ ನೀಡಿದರು.
    ತಾಪಂ ಇಒ ಮಹೇಶ್ ಕುಮಾರ್ ಹೊಳ್ಳ ನೋಡಲ್ ಅಧಿಕಾರಿಯಾಗಿದ್ದರು. ಪಂಚಾಯಿತಿ ಉಪಾಧ್ಯಕ್ಷೆ ರತ್ನಾ ಎಸ್, ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ಅನಿತಾ ಕ್ಯಾಥರಿನ್ ಸ್ವಾಗತಿಸಿದರು. ಲೆಕ್ಕಾಧಿಕಾರಿ ರಾಮಪ್ಪ, ಉದ್ಯೋಗಿ ಸೌಮ್ಯ ವರದಿ ಮಂಡಿಸಿದರು. ಪಂಚಾಯಿತಿ ಸಿಬ್ಬಂದಿ ಸಹಕರಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts