More

    ಮುಡಾ ನಿವೇಶನಕ್ಕಿಲ್ಲ ಡಿಮಾಂಡ್

    ಹರೀಶ್ ಮೋಟುಕಾನ, ಮಂಗಳೂರು
    ಕುಂಜತ್ತಬೈಲ್‌ನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸಿದ್ಧಪಡಿಸಿದ ವಸತಿ ಬಡಾವಣೆಗೆ ಸಾರ್ವಜನಿಕರಿಂದ ನಿರೀಖ್ಷಿತ ಮಟ್ಟದಲ್ಲಿ ಸ್ಪಂದನೆ ವ್ಯಕ್ತವಾಗಿಲ್ಲ. 182 ವಾಸ್ತವ್ಯದ ನಿವೇಶನಗಳಿಗೆ ಅರ್ಜಿ ಆಹ್ವಾನಿಸಿ ನಾಲ್ಕು ತಿಂಗಳು ಕಳೆದರೂ ಮಾರಾಟವಾಗಿದ್ದು ಬೆರಳೆಣಿಕೆಯಷ್ಟು ನಿವೇಶನ ಮಾತ್ರ.

    ಹನ್ನೆರಡು ವರ್ಷಗಳ ಬಳಿಕ ಕುಂಜತ್ತಬೈಲ್‌ನಲ್ಲಿ ಮುಡಾ ವಸತಿ ಬಡಾವಣೆ ನಿರ್ಮಿಸಿದೆ. ಒಟ್ಟು 17 ಎಕರೆ 49 ಸೆಂಟ್ಸ್ ಜಾಗ ಲಭ್ಯ ವಿದೆ. ಸೂಕ್ತ ದಾಖಲೆಗಳೊಂದಿಗೆ 30 ದಿನಗಳ ಒಳಗೆ ಅರ್ಜಿ ಸಲ್ಲಿಸಲು ಮಾ.6ರಿಂದ ಏ.6ರ ತನಕ ಅವಕಾಶ ಕಲ್ಪಿಸಿತ್ತು. ಬಳಿಕ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿತ್ತು. ಆದರೂ, ಇದುವರೆಗೆ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ಇಲ್ಲ. ಇದೀಗ ಮುಡಾ ಮತ್ತೆ ಅರ್ಜಿ ಆಹ್ವಾನಿಸಿದೆ.

    ರಸ್ತೆ, ಚರಂಡಿ, ವಿದ್ಯುತ್, ನೀರು ಮೊದಲಾದ ಮೂಲಸೌಕರ್ಯ ಕಲ್ಪಿಸಲಾಗಿದೆ. ನಿವೇಶನದ ಮಧ್ಯದಲ್ಲಿ ಕೆರೆ ನಿರ್ಮಿಸಲಾಗಿದ್ದು, ಸುತ್ತಲೂ ವಾಕಿಂಗ್ ಟ್ರಾೃಕ್ ಮಾಡಲಾಗಿದೆ. ಬಡಾವಣೆಯನ್ನು ಸುಂದರಗೊಳಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿಯಮಾನುಸಾರ ಹಂಚಿಕೆ ಮಾಡಿ ಅವಕಾಶ ನೀಡಲಾಗಿದೆ. ಆದರೂ, ಜನರು ಖರೀದಿಗೆ ಆಸಕ್ತರಾಗಿಲ್ಲ.

    ನಿಗದಿಪಡಿಸಿದ ದರ: 1.33 ಸೆಂಟ್ಸ್‌ಗೆ 11,36,700 ರೂ, 2.67 ಸೆಂಟ್ಸ್‌ಗೆ 22,73,400 ರೂ, 4.45 ಸೆಂಟ್ಸ್‌ಗೆ 37,89,000 ರೂ, 5.34 ಸೆಂಟ್ಸ್‌ಗೆ 45,46,800 ರೂ, 7.12 ಸೆಂಟ್ಸ್‌ಗೆ 60,62,400 ರೂ, 1.33ರಿಂದ ಜಾಸ್ತಿ ಅನಿಯತ 15,15,600 ರೂ, 4.45ರಿಂದ ಜಾಸ್ತಿ ಅನಿಯತ 50,52,300 ರೂ, ಅನಿಯತ 25 ಲಕ್ಷ ರೂ.ನಿಗದಿಪಡಿಸಲಾಗಿದೆ.

    ಮಧ್ಯಮ ವರ್ಗಕ್ಕೆ ದರ ಹೊರೆ

    ಸಾರ್ವಜನಿಕರು ಖರೀದಿಸದಿರಲು ನಿವೇಶನಗಳ ದರ ಹೆಚ್ಚಳವೇ ಕಾರಣ ಎನ್ನಲಾಗುತ್ತಿದೆ. ಕುಂಜತ್ತಬೈಲ್ ನಗರದಿಂದ ನಿವೇಶನ ಏಳೆಂಟು ಕಿ.ಮೀ. ದೂರದಲ್ಲಿದೆ. ಅಲ್ಲಿ ಸೆಂಟ್ಸ್‌ಗೆ ಸರಾಸರಿ 8 ಲಕ್ಷ ರೂ.ನಿಗದಿ ಮಾಡಲಾಗಿದೆ. ಈ ಭಾಗದಲ್ಲಿ ಇದಕ್ಕಿಂತ ಕಡಿಮೆ ದರಕ್ಕೆ ಖಾಸಗಿ ಸೈಟ್‌ಗಳು ಸಿಗುತ್ತವೆ. ಆದುದರಿಂದ ಮುಡಾ ನಿವೇಶನ ಖರೀದಿಗೆ ಯಾರೂ ಮುಂದಾಗುತ್ತಿಲ್ಲ. ಬಂದು ನೋಡಿದವರು ನಗರದಿಂದ ದೂರವಿದೆ ಎನ್ನುವ ಕಾರಣ ಹೇಳುತ್ತಿದ್ದಾರೆ. ಮಧ್ಯಮ ವರ್ಗದವರಿಗೆ ನಿಗದಿಪಡಿಸಿದ ದರ ಹೊರೆಯಾಗಿದೆ. 5.34 ಸೆಂಟ್ಸ್ ನಿವೇಶನ ಖರೀದಿಸಿ, ಮನೆ ಕಟ್ಟುವಾಗ ಒಂದು ಕೋಟಿ ರೂ.ಖರ್ಚಾಗುವ ಸಾಧ್ಯತೆ ಇದೆ.

    ಕುಂಜತ್ತಬೈಲ್ ಪರಿಸರದಲ್ಲಿ ಖಾಸಗಿ ನಿವೇಶನ ದರ ಕಡಿಮೆ ಇದೆ. ಮುಡಾ ನಿವೇಶನದಲ್ಲಿ ಎಲ್ಲ ಸೌಲಭ್ಯವನ್ನೂ ಕಲ್ಪಿಸಿದ್ದಾರೆ. ಆದರೆ, ದರ ಹೆಚ್ಚಳ ಹಾಗೂ ನಗರದಿಂದ ದೂರ ಇರುವ ಕಾರಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಲಭಿಸಿಲ್ಲ ಎಂದು ಹೇಳಲಾಗುತ್ತಿದೆ.
    -ಶರತ್‌ಕುಮಾರ ಮನಪಾ ಸದಸ್ಯ, ಕುಂಜತ್ತಬೈಲ್ ವಾರ್ಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts