

ಹಾವೇರಿ: 2019ರಲ್ಲಿ ಉಂಟಾದ ಅತಿವೃಷ್ಟಿ ಹಾಗೂ ನೆರೆಯಿಂದ ಮನೆಹಾನಿ ಪರಿಹಾರ ಪಡೆದವರಲ್ಲಿ ಜಿಲ್ಲೆಯಾದ್ಯಂತ 505 ಫಲಾನುಭವಿಗಳನ್ನು ಅನರ್ಹರೆಂದು ಗುರುತಿಸಲಾಗಿದೆ. ಈಗಾಗಲೇ ಅವರೆಲ್ಲರ ಮನೆಗಳನ್ನು ವಸತಿ ನಿಗಮದಲ್ಲಿ ಬ್ಲಾಕ್ ಮಾಡಿ, ಈವರೆಗೆ ಪಡೆದ ಪರಿಹಾರ ಹಣವನ್ನು ಮರಳಿ ವಸೂಲಿ ಮಾಡುವಂತೆ ಜಿಲ್ಲಾಡಳಿತ ಆದೇಶಿಸಿದೆ.
ಹಾವೇರಿ ತಾಲೂಕಿನಲ್ಲಿ 294 ಫಲಾನುಭವಿಗಳನ್ನು ಅನರ್ಹರೆಂದು ಗುರುತಿಸಲಾಗಿದೆ. ಇನ್ನುಳಿದ 7 ತಾಲೂಕುಗಳಲ್ಲಿ 211 ಫಲಾನುಭವಿಗಳನ್ನು ಅನರ್ಹರೆಂದು ಗುರುತಿಸಲಾಗಿದೆ.
ಅನರ್ಹರು ಎಲ್ಲಿ ಎಷ್ಟು: ಹಾವೇರಿ ತಾಲೂಕಿನ 33 ಗ್ರಾಪಂಗಳ ಪೈಕಿ 27 ಗ್ರಾಪಂಗಳಲ್ಲಿ ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದಾರೆ. ಅಗಡಿಯಲ್ಲಿ 15, ಬಸಾಪುರದಲ್ಲಿ 9, ಬೆಳವಿಗಿಯಲ್ಲಿ 23, ಬೂದಗಟ್ಟಿಯಲ್ಲಿ 29, ದೇವಗಿರಿಯಲ್ಲಿ 74, ದೇವಿಹೊಸೂರನಲ್ಲಿ 1, ಹಂದಿಗನೂರ 5, ಹಾವನೂರ 2, ಹಾಂವಶಿ 7, ಹಾಲಗಿ 3, ಹೊಂಬರಡಿ 1, ಹೊಸರಿತ್ತಿ 29, ಹೊಸಕಿತ್ತೂರ 7, ಕಬ್ಬೂರ 2, ಕನಕಾಪುರ 3, ಕಂಚಾರಗಟ್ಟಿ 1, ಕರ್ಜಗಿ 31, ಕಾಟೇನಹಳ್ಳಿ 1, ಕೂರಗುಂದ 12, ಕೋಣನತಂಬಿಗಿ 7, ಮರೋಳ 6, ಮೇವುಂಡಿ 2, ನಾಗನೂರ 7, ನೆಲೋಗಲ್ಲ 3, ನೆಗಳೂರ 1, ಸಂಗೂರ 1, ಯಲಗಚ್ಚದಲ್ಲಿ 12 ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ.
ಅತಂತ್ರ ಸ್ಥಿತಿಯಲ್ಲಿ ಫಲಾನುಭವಿಗಳು: ‘ಮನೆಹಾನಿ ಪರಿಹಾರ ಪಡೆದ ಫಲಾನುಭವಿಗಳನ್ನು ಜಿಲ್ಲಾಡಳಿತ ಅನರ್ಹರೆಂದು ಗುರುತಿಸಿದ ಪರಿಣಾಮ ಈಗಾಗಲೇ ಮನೆಕಟ್ಟಿಕೊಳ್ಳಲು ಅಡಿಪಾಯ ಹಾಕಿರುವವರು ಮುಂದೇನು ಮಾಡೋದು. ಸರ್ಕಾರದಿಂದ ಮನೆ ನಿರ್ವಣದ ಆದೇಶ ಪತ್ರ ಸಿಕ್ಕ ನಂತರ ಹಂತಹಂತವಾಗಿ ಹಣ ಬರುತ್ತದೆ ಎಂದು ನಂಬಿ ಅಲ್ಪಸ್ವಲ್ಪ ಬಿದ್ದ ಮನೆಯನ್ನು ಪೂರ್ಣವಾಗಿ ಕೆಡಿವಿ ಹೊಸದಾಗಿ ಮನೆ ನಿರ್ವಿುಸಿಕೊಳ್ಳಲು ಮುಂದಾಗಿದ್ದಾರೆ. ಇದೀಗ ಮುಂದೆ ಮನೆ ಕಟ್ಟಲು ಹಣ ಬರದಂತೆ ವಸತಿ ನಿಗಮದಲ್ಲಿ ಮನೆಗಳನ್ನು ಬ್ಲಾಕ್ ಮಾಡಿದ್ದಲ್ಲದೇ ಈವರೆಗೆ ಪಡೆದಿರುವ ಪರಿಹಾರದ ಹಣವನ್ನು ಮರಳಿಸುವಂತೆ ನೋಟಿಸ್ ಕೊಟ್ರೆ ಏನು ಗತಿ. ಪರಿಹಾರವಾಗಿ ಮೊದಲ ಕಂತಿನಲ್ಲಿ ನೀಡಿರುವ ಹಣವನ್ನು ನಾವೇನು ಮೋಜು ಮಸ್ತಿಗೆ ಖರ್ಚು ಮಾಡಿಲ್ಲ. ಅದರಿಂದಲೇ ಅಡಿಪಾಯ ಹಾಕಿಕೊಂಡಿದ್ದೇವೆ. ಈಗ ಅದನ್ನು ಮರಳಿ ಕೊಡಿ ಅಂದ್ರೆ ಹೆಂಗ್ರಿ, ಇತ್ತ ಅಪೂರ್ಣವಾಗಿರುವ ಮನೆ ಕಟ್ಟಲು ಮುಂದೆ ಹಣವೂ ಬರೋಲ್ಲ. ಈಗ ಮನೆಯೂ ಇಲ್ಲ. ಸರ್ಕಾರವೇ ನಮ್ಮನ್ನು ಅತಂತ್ರ ಮಾಡಲು ಹೊರಟಿದೆ’ ಎಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮನೆ ಬಿದ್ದರೂ ರೊಕ್ಕಾ ಕೊಟ್ಟೀವ್ರಿ: ‘ಮನೆಹಾನಿ ಸಮೀಕ್ಷೆಯ ಸಮಯದಲ್ಲಿ ಗ್ರಾಮಕ್ಕೆ ಬಂದ ಅಧಿಕಾರಿಗಳು ಮನೆ ಬಿದ್ದಿದ್ದರೂ ಇದು ಹಳೇ ಮನೆ, ಇಲ್ಲಿ ಯಾರು ವಾಸವಿಲ್ಲ ಎಂಬ ನಾನಾ ಕಾರಣ ಹೇಳಿ ಸಿ ಕೆಟಗರಿ ಮಾಡ್ತೀವಿ. ರೊಕ್ಕಾ ಕೊಟ್ಟರಷ್ಟೇ ಎ, ಬಿ, ಕೆಟಗರಿ ಮಾಡ್ತೇವೆ ಎಂದು ಹೇಳಿ ಅಧಿಕಾರಿಗಳು ಆಗ ನಮ್ಮಿಂದ ಹಣ ಪಡೆದಿದ್ದಾರೆ. ಮೊದಲ ಕಂತಿನ ಹಣದಲ್ಲಿ ಅರ್ಧಕ್ಕೂ ಹೆಚ್ಚು ಪಾಲನ್ನು ಅವರಿಗೆ ಕೊಟ್ಟೀವಿ. ಈಗ ಮೊದ್ಲು ಅವರನ್ನು ಹಿಡಿದು ಶಿಕ್ಷೆ ಕೊಡಿಸ್ರಿ’ ಎಂಬ ಮಾತುಗಳು ಫಲಾನುಭವಿಗಳಿಂದ ಕೇಳಿ ಬರುತ್ತಿವೆ.
ನೆರೆ ಹಾವಳಿಯಿಂದ ಚೇತರಿಸಿಕೊಂಡು ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದ ಗ್ರಾಮೀಣ ಜನರು ನಗರ ಪ್ರದೇಶಗಳಲ್ಲಿ ಉದ್ಯೋಗ ಅರಸಿ ಬಂದಿದ್ದರು. ಬೆಳೆಯೆಲ್ಲ ನೀರು ಪಾಲಾದರೂ ನಗರದಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆ ಸಮಯದಲ್ಲಿಯೇ ಕರೊನಾ ವಕ್ಕರಿಸಿ ಅವರಿಗೆ ಕೆಲಸವೂ ಹೋಯಿತು. ಮರಳಿ ಹಳ್ಳಿ ಸೇರಿದರು. ಸರ್ಕಾರ ಕೊಟ್ಟ ಪರಿಹಾರವನ್ನೇ ನಂಬಿ ಸೂರು ಕಟ್ಟಿಕೊಂಡರಾತು ಎನ್ನುವಷ್ಟರಲ್ಲಿ ಅವರನ್ನೆಲ್ಲ ಅನರ್ಹರೆಂದು ಘೊಷಿಸಿರುವುದು ಆಕಾಶವೇ ಕಳಚಿ ಮೈಮೇಲೆ ಬಿದ್ದಂತಾಗಿದೆ. ಸತೀಶ ಸಂದಿಮನಿ, ತಾಪಂ ಸದಸ್ಯ