

ಗೌರಿಬಿದನೂರು : ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದು ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ವಿವಿಧ ಸಂಘಟನೆಗಳಿಂದ ನಗರದ ಎಂ.ಜಿ. ವೃತ್ತದಲ್ಲಿ ಸೋಮವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ವಿಹಿಂಪ ತಾಲೂಕು ಅಧ್ಯಕ್ಷ ಸಾಗನಹಳ್ಳಿ ಶಿವಕುಮಾರ್ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಆಂತರಿಕ ವಿಷಯಕ್ಕೆ ಭುಗಿಲೆದ್ದ ಹಿಂಸಾಚಾರ ಜನಾಂಗೀಯ ಹಿಂಸೆಗೆ ತಿರುಗಿದೆ. ಅಲ್ಪಸಂಖ್ಯಾತ ಹಿಂದುಗಳು, ಹಿಂದು ದೇವಾಲಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಮೃಗೀಯ ರೀತಿಯಲ್ಲಿ ದೌರ್ಜನ್ಯ ಎಸಗಲಾಗುತ್ತಿದೆ. ಸ್ಥಳೀಯ ಸರ್ಕಾರ ಇಂತಹ ಕೃತ್ಯಗಳನ್ನು ಹತ್ತಿಕ್ಕುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ವಿಶ್ವ ಸಂಸ್ಥೆ ಸೇರಿ ಜಾಗತಿಕ ಮಟ್ಟದ ವೇದಿಕೆಗಳು ಮಧ್ಯಪ್ರವೇಶಿಸಿ ಬಾಂಗ್ಲಾದಲ್ಲಿ ಶಾಂತಿ ನೆಲೆಸಲು ಹಾಗೂ ಹಿಂದುಗಳ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕೋಚಿಮಲ್ ಮಾಜಿ ಅಧ್ಯಕ್ಷ ಎಸ್. ರಮೇಶ್ ಮಾತನಾಡಿ, ಮಾನವೀಯ ಸಂಬಂಧಗಳಿಗೆ ಬೆಲೆ ಕೊಡದೆ ತಲೆತಲಾಂತರಗಳಿಂದ ನೆಲೆಸಿದ್ದ ಹಿಂದುಗಳನ್ನು ಬಾಂಗ್ಲಾದೇಶದಿಂದ ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಅಪ್ರಚೋದಿತ ದಾಳಿ ನಡೆಸಲಾಗುತ್ತಿದೆ. ಈ ಬಗ್ಗೆ ಭಾರತ ಸರ್ಕಾರ ಗಮನಹರಿಸಬೇಕು. ವಿಶ್ವದ ಗಮನ ಸೆಳೆದು ಹಿಂದುಗಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಹಿಂದು ಸಮಾಜದ ಬಂಧುಗಳು ತಾಲೂಕು ಕಚೇರಿಗೆ ಧಾವಿಸಿ ತಹಸೀಲ್ದಾರ್ ಮಹೇಶ್ ಎಸ್. ಪತ್ರಿ. ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಹಿಂದು ಸಮಾಜದ ಬಂಧುಗಳಾದ ವೇಣುಜೀ, ವಿಜಯ್ ಕುಮಾರ್, ಮಾರ್ಕೆಟ್ ಮೋಹನ್, ನಗರಸಭೆ ಮಾಜಿ ಸದಸ್ಯ ಅನಂತರಾಜು, ಪರಿಸರವಾದಿ ಚೌಡಪ್ಪ, ವೇಣು ಮಾದವ್, ಸ್ವಾಗತ್, ಬೈಪಾಸ್ ರವಿ, ಹೋಟೆಲ್ ರಮೇಶ್, ವೆಂಕಟೇಶ್, ಶಿವಾರೆಡ್ಡಿ, ದಯಾನಂದ, ನಾಗೇಶ್, ಎಬಿವಿಪಿ ಚಂದ್ರಶೇಕರ್, ಕೊಡ್ಲೀರಪ್ಪ, ನಿವೃತ್ತ ಸೈನಿಕರ ಸಂಘದ ಸದಸ್ಯರು ಭಾಗವಹಿಸಿದ್ದರು.