ಅಸಂಘಟಿತ ಕಾರ್ಮಿಕರು ಇಪಿಎಫ್‌ಒ ಸೇರ್ಪಡೆ: 115 ಮಂದಿಗೆ ನೇಮಕಾತಿ ಪತ್ರ ವಿತರಣೆ

shobha
Published on

ಬೆಂಗಳೂರು: ದೇಶದ ಪ್ರತಿ ವ್ಯಕ್ತಿಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಹಾಗೂ ನೌಕರರ ರಾಜ್ಯ ವಿಮೆ (ಇಎಸ್‌ಐ) ವ್ಯಾಪ್ತಿಗೆ ತರುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೇಂದ್ರದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲ್ಲಿ ಅಂಚೆ ಇಲಾಖೆ, ಶುಕ್ರವಾರ ಕಬ್ಬನ್‌ಪಾರ್ಕ್‌ನ ಎನ್‌ಜಿಒ ಹಾಲ್‌ನಲ್ಲಿ ಆಯೋಜಿಸಿದ್ದ ‘ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮ’ದಲ್ಲಿ ಮಾತನಾಡಿದರು.

5 ವರ್ಷದಲ್ಲಿ 7 ಕೋಟಿ ಉದ್ಯೋಗಿಗಳು ಹೊಸದಾಗಿ ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ. ದೇಶದಲ್ಲಿ ಶೇ.10 ಮಂದಿ ಇಪಿಎಫ್‌ಒ, ಇಎಸ್‌ಐ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದವರು ಇದರಿಂದ ಹೊರಗಿದ್ದಾರೆ. ದೇಶದ ಬಹುತೇಕ ಜನರು ಅಸಂಘಟಿತ ಕಾರ್ಮಿಕರಾಗಿದ್ದು, ಅವರನ್ನು ಇಎಸ್‌ಐ, ಇಪಿಎಫ್‌ಒ ವ್ಯಾಪ್ತಿಗೆ ಸೇರಿಸುವ ಕಾರ್ಯವಾಗುತ್ತಿದೆ ಎಂದರು.

ನೇಮಕಾತಿ ಪತ್ರ ವಿತರಣೆ:

ಬೆಂಗಳೂರು ಸೇರಿ ದೇಶದ 40 ಕಡೆಗಳಲ್ಲಿ ನಡೆಯುತ್ತಿರುವ ರೋಜ್‌ಗರ್ ಮೇಳದಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಹೊಸದಾಗಿ ಉದ್ಯೋಗ ಪಡೆದ 51 ಸಾವಿರ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಬೆಂಗಳೂರಿನ ಉದ್ಯೋಗ ಮೇಳದಲ್ಲಿ ರೈಲ್ವೆ ಸಚಿವಾಲಯ 30, ಹಣಕಾಸು ಸೇವೆ ಇಲಾಖೆ 9, ಸಂವಹನ ಸಚಿವಾಲಯ 15, ನಿಮ್ಹಾನ್ಸ್ 9, ಕಂದಾಯ 16 ಮತ್ತು ಪರಿಸರ 4 ಸೇರಿ 115 ಮಂದಿಗೆ ನೇಮಕಾತಿ ಪತ್ರ ನೀಡಲಾಯಿತು. ರೈಲ್ವೆ ಇಲಾಖೆ ಹಿರಿಯ ಡಿಪಿಒ ಉಮಾ ಶರ್ಮಾ, ಅಂಚೆಸೇವೆ ನಿರ್ದೇಶಕ ಸಂದೇಶ್ ಮಹದೇವಪ್ಪ ಮತ್ತಿತರರಿದ್ದರು.

ದೇಶ ಪ್ರಗತಿಯಾಗುತ್ತಿದ್ದರೆ ಮಾತ್ರ ಉದ್ಯೋಗ ಸೃಷ್ಟಿಸಲು ಸಾಧ್ಯ. ವಿಶ್ವದ 10ನೇ ದೊಡ್ಡ ಆರ್ಥಿಕತೆಯಾಗಿದ್ದ ಭಾರತ, ಇದೀಗ 4ನೇ ದೊಡ್ಡ ಆರ್ಥಿಕತೆ ರಾಷ್ಟ್ರವಾಗಿ ಬೆಳೆದಿದೆ. ನೆರೆ ರಾಷ್ಟ್ರಗಳು ದಿವಾಳಿಯತ್ತ ಸಾಗುತ್ತಿದ್ದಾಗ, ನಮ್ಮ ರಾಷ್ಟ್ರ ಪ್ರಗತಿಯತ್ತ ಇರುವುದು ಉತ್ತಮ ನಾಯಕತ್ವ ಹೊಂದಿದೆ ಎಂಬುದನ್ನು ಸೂಚಿಸುತ್ತದೆ.

- ಪಿ.ಸಿ. ಮೋಹನ್ ಸಂಸದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net