

ಆಲೂರು: ತಾಲೂಕಿನ ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ನೀಲಮ್ಮ ಹಾಗೂ ಉಪಾಧ್ಯಕ್ಷರಾಗಿ ಎಸ್. ಆರ್. ಅಶ್ವತ್ಥ ಅವಿರೋಧ ಆಯ್ಕೆಯಾದರು.
ಹಿಂದಿನ ಸಾಲಿಗೆ ಅಧ್ಯಕ್ಷರಾಗಿದ್ದ ಭವ್ಯಾ ಪುರುಷೋತ್ತಮ ಹಾಗೂ ಉಪಾಧ್ಯಕ್ಷರಾಗಿದ್ದ ಉಮೇಶ್ ಅವರು ಪಕ್ಷದ ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ಆಯೋಜನೆಗೊಂಡಿತ್ತು. 18 ಸದಸ್ಯರಿರುವ ಜೆಡಿಎಸ್ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ನೀಲಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಅಶ್ವತ್ಥ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯನ್ನು ಚುನಾವಣಾಕಾರಿ ಗಿರೀಶ್ ಘೋಷಣೆ ಮಾಡಿದರು.
ಅಧ್ಯಕ್ಷೆ ನೀಲಮ್ಮ ಮಾತನಾಡಿ, ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜೇಗೌಡ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ, ತಾಪಂ ಮಾಜಿ ಸದಸ್ಯ ಸಿ.ವಿ.ಲಿಂಗರಾಜು, ಮಾಜಿ ಅಧ್ಯಕ್ಷ ಪ್ರಕಾಶ ಇತರರು ಇದ್ದರು.