ಕೃಷಿ ಭೂಮಿಗೆ ಜಲಕಂಟಕ! : ತೆರೆಯದ ಕಿಂಡಿ ಅಣೆಕಟ್ಟು ಗೇಟು : ರೈತರ ಜಮೀನು ನದಿಪಾಲು

New Project (47)
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಪುತ್ತೂರು ನಗರಸಭೆಯ ಕುಡಿಯುವ ನೀರು ಪೂರೈಕೆ ಸಲುವಾಗಿ 34ನೇ ನೆಕ್ಕಿಲಾಡಿಯಲ್ಲಿ ಕುಮಾರಧಾರಾ ನದಿಗೆ ಕಟ್ಟಲಾದ ಕಿಂಡಿ ಅಣೆಕಟ್ಟಿನ ಗೇಟುಗಳನ್ನು ತೆರವು ಮಾಡದೆ ಇರುವುದರಿಂದ ರಭಸವಾಗಿ ಹರಿದು ಬರುವ ನೀರನ್ನು ಕಿಂಡಿ ಅಣೆಕಟ್ಟು ತಡೆಯೊಡ್ಡುತ್ತಿರುವ ಪರಿಣಾಮ ನದಿ ಕಿನಾರೆಯ ಕೃಷಿ ಭೂಮಿ ಸವಕಳಿಯಾಗುತ್ತಿದ್ದು, ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪುತ್ತೂರು ನಗರಸಭಾ ವ್ಯಾಪ್ತಿಯ ಜನತೆಗೆ ಕುಡಿಯುವ ನೀರು ಸರಬರಾಜುಗೊಳಿಸುವ ಉದ್ದೇಶದಿಂದ ನಿ ರ್ಮಾಣಗೊಂಡಿರುವ ಈ ಕಿಂಡಿ ಅಣೆಕಟ್ಟಿಗೆ ಮಳೆಗಾಲ ಮುಗಿದಾಕ್ಷಣ ಗೇಟು ಅಳವಡಿಸಿ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಕಳೆದೆರಡು ವರ್ಷಗಳಲ್ಲಿ ಬಿಳಿಯೂರು ನೇತ್ರಾವತಿ ನದಿಯ ಅಣೆಕಟ್ಟಿನಲ್ಲಿ ಗೇಟು ಅಳವಡಿಸಿದ ಬಳಿಕ ಸಂಗ್ರಹವಾಗುವ ಹಿನ್ನೀರಿನಿಂದ ಈ ಕಿಂಡಿ ಅಣೆಕಟ್ಟು ಕೂಡ ಮುಳುಗಡೆಯಾಗುತ್ತಿದೆ. ಈ ಕಾರಣದಿಂದ ಇಲ್ಲಿನ ಕಿಂಡಿ ಅಣೆಕಟ್ಟಿಗೆ ಗೇಟು ಅಳವಡಿಸುವ ಅವಶ್ಯಕತೆ ಇಲ್ಲದಿದ್ದರೂ ಬಿಳಿಯೂರು ಅಣೆಕಟ್ಟು ಹೆಚ್ಚುವರಿ ಜಲಾಶಯವಾಗಿ ಪರಿಗಣಿಸಲ್ಪಟ್ಟಿದ್ದು, ಯಾವುದೇ ಸಂದರ್ಭದಲ್ಲಿ ನೀರನ್ನು ಹರಿಯಬಿಡಬಹುದಾಗಿದೆ. ಈ ನಿಟ್ಟಿನಲ್ಲಿ ಮುಂದಾಲೋಚನೆಯಿಂದ ಇಲ್ಲಿನ ಕಿಂಡಿ ಅಣೆಕಟ್ಟಿಗೆ ಗೇಟು ಅಳವಡಿಸುವ ಕಾರ್ಯವನ್ನು ಪ್ರತಿವರ್ಷ ಮಾಡಲಾಗುತ್ತಿದೆ. ಅದರಂತೆ ಈ ಬಾರಿ ಅಳವಡಿಸಲಾದ ಗೇಟುಗಳನ್ನು ತೆರವುಗೊಳಿಸದೇ ಇರುವುದರಿಂದ ಮಳೆಗಾಲದಲ್ಲಿ ನದಿ ಕಿನಾರೆಯ ಕೃಷಿಕರಿಗೆ ಪ್ರತಿಕೂಲ ಪರಿಣಾಮ ಉಂಟಾಗಿದೆ.

ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ತೀವ್ರವಾಗಿದ್ದು, ಇದು ಕಿಂಡಿ ಅಣೆಕಟ್ಟಿಗೆ ಅಪ್ಪಳಿಸಿ ಪರಿಸರದ ಕೃಷಿ ಭೂಮಿಗೆ ಕಡಲ ತೆರೆಯಂತೆ ಬಡಿಯುತ್ತಿದೆ. ಇದರಿಂದಾಗಿ ಈ ಬಾರಿಯ ಮಳೆಗಾಲದ ಎರಡು ತಿಂಗಳಾವಧಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಕೃಷಿ ಭೂಮಿ ನದಿಪಾಲಾಗಿದೆ.

ಈ ಬಾರಿ ಮೇ ತಿಂಗಳಲ್ಲೇ ಮಳೆಗಾಲ ಬಿರುಸಿನಿಂದ ಪ್ರಾರಂಭವಾದ ಕಾರಣ ಕಿಂಡಿ ಅಣೆಕಟ್ಟಿಗೆ ಅಳವಡಿಸಿದ ಗೇಟು ತೆರವು ಕಾರ್ಯ ಅಸಾಧ್ಯವಾಯಿತು. ಮೂರು ಗೇಟುಗಳನ್ನು ತೆಗೆಯುವಷ್ಟರಲ್ಲಿ ನದಿಯಲ್ಲಿನ ನೀರಿನ ಹರಿವು ಹೆಚ್ಚಾಗ ತೊಡಗಿ ತೆಗೆಯಲಾದ ಮೂರು ಗೇಟುಗಳನ್ನು ಕೊಚ್ಚಿ ಕೊಂಡೊಯ್ದಿದೆ. ಬಳಿಕದ ದಿನದಿಂದ ನೀರಿನ ಹರಿವು ಹೆಚ್ಚುತ್ತಿರುವುದರಿಂದ ಗೇಟು ತೆರವುಗೊಳಿಸಲು ಸಾಧ್ಯವಾಗಿಲ್ಲ. ಇಲ್ಲಿ ಮಾನವ ಶ್ರಮದೊಂದಿಗೆ ಗೇಟು ಅಳವಡಿಸುವ ಮತ್ತು ತೆರವುಗೊಳಿಸುವ ಕಾರ್ಯ ನಡೆಯುವುದರಿಂದ ನದಿಯ ನೀರಿನ ಪ್ರವಾಹದ ವೇಗಕ್ಕೆ ತೆರವು ಕಾರ್ಯ ಅಸಾಧ್ಯ. ಜಯರಾಮ್, ನೀರು ಸರಬರಾಜು ಘಟಕ ಕುಮಾರಧಾರಾ ನದಿಯ ಕಿಂಡಿ ಅಣೆೆಕಟ್ಟಿಗೆ ಅಳವಡಿಸಲಾದ ಗೇಟುಗಳನ್ನು ತೆರವು ಮಾಡದೇ ಇರುವುದರಿಂದ ಕೃಷಿಕರು ಅಪಾಯಕ್ಕೆ ಸಿಲುಕುವಂತಾಗಿದೆ. ನದಿ ದಡದಲ್ಲಿರುವ ನಮ್ಮ ಕೃಷಿ ಭೂಮಿ ನದಿ ನೀರು ಅಪ್ಪಳಿಸುವುದರಿಂದ ಭೂ ಕುಸಿತವುಂಟಾಗಿ ಭೂಮಿಯನ್ನು ಕಳೆದುಕೊಳ್ಳುವಂತಾಗಿದೆ. ಈ ಕರ್ತವ್ಯ ಲೋಪದಿಂದ ಉಂಟಾಗಿರುವ ನಷ್ಟಕ್ಕೆ ಯಾರು ಹೊಣೆ? ಜಿಲ್ಲಾಡಳಿತ ಈ ಬಗ್ಗೆ ತ್ವರಿತವಾಗಿ ಗಮನ ಹರಿಸಬೇಕಿದೆ. ಉಂಟಾಗಿರುವ ಪ್ರಮಾದವನ್ನು ತುರ್ತು ಬಗೆಹರಿಸಬೇಕಿದೆ. ಶಾಂತಾರಾಮ ಕಾಂಚನ, ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net