

ಚಿಕ್ಕಬಳ್ಳಾಪುರ : ಮುಂಗಾರು ಪೂರ್ವದ ಮಳೆಗೆ ಜಿಲ್ಲಾ ಕೇಂದ್ರದ ತಗ್ಗು ಪ್ರದೇಶಗಳಲ್ಲಿನ ಬಡಾವಣೆಗಳಲ್ಲಿ ನೆಲೆಸಿರುವ ಸ್ಥಳೀಯ ಜನರು ತೊಂದರೆ ಅನುಭವಿಸುವಂತಾಗಿದೆ.
ಪ್ರತಿ ವರ್ಷದಂತೆ ಚರಂಡಿಗಳು ತ್ಯಾಜ್ಯದೊಂದಿಗೆ ಮಳೆಯ ನೀರು ಮನೆಗಳಿಗೆ ನುಗ್ಗಿವೆ. ಕೆಲ ಬಡಾವಣೆಗಳ ಜಲಾವೃತದಿಂದ ಉಂಟಾಗಿರುವ ನಾನಾ ಸಮಸ್ಯೆಗಳಿಗೆ ಜನರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಮತ್ತೊಂದೆಡೆ ಮಳೆಯಿಂದ ಬೆಳೆ ಹಾನಿ, ಪ್ರಾಣ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತವು ಜಪಿಸುತ್ತಿದೆ.
ಜಿಲ್ಲಾ ಕೇಂದ್ರ ನಗರಿ ಚಿಕ್ಕಬಳ್ಳಾಪುರದಲ್ಲಿನ ಕೆರೆಯ ಅಚ್ಚುಕಟ್ಟು ಪ್ರದೇಶ ಮತ್ತು ಕಾಲುವೆಗಳಿಗೆ ಹೊಂದಿಕೊಂಡಿರುವಂತೆ ಮೈಲಪನಹಳ್ಳಿ ರಸ್ತೆ, ಜೈ ಭೀಮ್ ಬಡಾವಣೆ, ಸರ್ಕಾರಿ ಜಿಲ್ಲಾಸ್ಪತ್ರೆ ಮುಂಭಾಗ ಸೇರಿ ವಿವಿಧೆಡೆ ಮಳೆಯ ಅವಾಂತರಗಳಿಗೆ ಆಕ್ರೋಶ ವ್ಯಕ್ತವಾಗಿದೆ.
ಮಳೆಗೆ ನರಕಯಾತನೆ: ನಗರದ 8 ಮತ್ತು 9 ವಾರ್ಡ್‌ಗಳಲ್ಲಿ ಪ್ರತಿ ಮಳೆಗಾಲದ ಸಂದರ್ಭದಲ್ಲಿ ಮನೆಗಳಿಗೆ ಮಳೆ, ಚರಂಡಿ ಮತ್ತು ಯುಜಿಡಿ ನೀರು ನುಗ್ಗುವುದು ವಾಡಿಕೆ. ಇದರಿಂದ ಜನರು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದು, ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸುವವರಿಲ್ಲ ಎಂಬುದಾಗಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಶನಿವಾರ ಸುರಿದ ಮಳೆಗೆ ಇಡೀ ರಾತ್ರಿ ಮನೆ ಒಳಗೆ ನುಗ್ಗಿದ ಕೊಳಚೆ ನೀರನ್ನು ಹೊರ ಹಾಕುವಲ್ಲಿ ಹೈರಾಣಾಗಿದ್ದಾರೆ. ಹಿಂದೆ ಮಳೆಗಾಲದಲ್ಲಿ ಸಮಸ್ಯೆಗೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದರು. ಜಿಲ್ಲಾ ಕೇಂದ್ರದಲ್ಲಿನ ಸಮಸ್ಯೆ ನಿವಾರಣೆಯ ಸೂಕ್ತ ಕಾಮಗಾರಿ ಕೈಗೊಳ್ಳಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಬೆಳವಣಿಗೆಯಾಗಿಲ್ಲ. ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ಯುಜಿಡಿ, ಚರಂಡಿ ನೀರಿನ ದುರ್ವಾಸನೆ ಮಧ್ಯೆ ಊಟ ತಿಂಡಿ ಸೇವಿಸುವುದು ಹೇಗೆ? ಎಂಬ ಪ್ರಶ್ನೆ ಕೇಳಲಾಗುತ್ತಿದೆ.
ಹಾನಿಯ ವರದಿಯಾಗಿಲ್ಲ
ಕಳೆದ ಮೂರ್ನಾಲ್ಕು ದಿನಗಳಿಂದಲೂ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಇದರ ನಡುವೆ ಯಾವುದೇ ರೀತಿ ಹಾನಿಯ ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ನಗರದಲ್ಲಿ ಮಳೆಯ ಸಂದರ್ಭದಲ್ಲಿ ಅನೇಕರ ಮನೆಗಳಿಗೆ ನೀರು ನುಗ್ಗಿರುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ನಗರಸಭೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಂದ ಆಗುವ ಹಾನಿಯ ಕುರಿತು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುವ ಸಲುವಾಗಿ ಪ್ರತಿಯೊಂದು ತಾಲೂಕಿನ ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.
ಸಾಧಾರಣ ಮಳೆ
ಜಿಲ್ಲೆಯಲ್ಲಿ ಭಾನುವಾರ ಬಹುತೇಕ ಸಮಯ ಮೋಡ ಮುಸುಕಿದ ತಂಪು ವಾತಾವರಣ ಕಂಡು ಬಂತು. ಜಿಲ್ಲಾ ಕೇಂದ್ರದಲ್ಲಿ ಸಂಜೆ ಸಾಧಾರಣ ಮಳೆ ಸುರಿಯಿತು.
ಮಳೆಗಾಲದಿಂದ ಜನರು ತೊಂದರೆ ಅನುಭವಿಸುತ್ತಿರುವ ಸ್ಥಳಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿದಾಗ ಜನರ ನೋವು, ಗೋಳು, ಪರದಾಟ ಸೇರಿದಂತೆ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತದೆ.
ಎನ್.ಚಂದ್ರಶೇಖರ್, ಉಪನ್ಯಾಸಕ, ಚಿಕ್ಕಬಳ್ಳಾಪುರ
21 ಸಿಬಿಪಿ 1
ಚಿಕ್ಕಬಳ್ಳಾಪುರದ ಜೈ ಭೀಮ್ ಬಡಾವಣೆಯ ಮನೆಗೆ ಯುಜಿಡಿ ನೀರು ಹರಿದು ಬಂದಿರುವುದು.