

* 20ಕ್ಕೂ ಹೆಚ್ಚಿನ ಕಂಬಗಳಲ್ಲಿ ಒಂದೇ ಒಂದೂ ಬಲ್ಬ್ ಉರಿಯುತ್ತಿಲ್ಲ.
* ಸಿಸಿ ಕ್ಯಾಮರಾ ಇಲ್ಲದೆ ಸಮಸ್ಯೆ
* ನಗರಸಭೆಯ ಕಾರ್ಯವೈಖರಿಗೆ ಜನಾಕ್ರೋಶ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಬೆಂಗಳೂರು-ಮೈಸೂರು ರಸ್ತೆಯ ಪ್ರಮುಖ ಸ್ಥಳಗಳಲ್ಲೇ ಬೀದಿ ದೀಪಗಳು ಹದಗೆಟ್ಟಿದ್ದು, ರಸ್ತೆ ತುಂಬ ಕತ್ತಲು ಆವರಿಸಿ ಹಲವು ಸಮಸ್ಯೆಗೆ ಕಾರಣವಾಗುತ್ತಿದೆ.
ರಾಮನಗರದ ಹೃದಯಭಾಗದಲ್ಲಿ ಬೆಂಗಳೂರು-ಮೈಸೂರು ರಸ್ತೆಯ ನಾಲ್ಕು ಪಥ ಹಾದುಹೋಗಿದೆ. ಮಧ್ಯ ಭಾಗದಲ್ಲಿ ಜಾಲರಿ ನಿರ್ಮಾಣ ಮಾಡಿ ವಡೇರಹಳ್ಳಿಯಿಂದ ಅರ್ಚಕರಹಳ್ಳಿವರೆಗೆ ವಿದ್ಯುತ್ ಕಂಬ ಅಳವಡಿಸಿ ಒಂದೇ ಕಂಬದಲ್ಲಿ ಎರಡೂ ಕಡೆ ಬೆಳಕು ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ.
ಹಲವು ವರ್ಷಗಳ ಹಿಂದೆ ಕಂಬಗಳನ್ನು ಹಾಕಿ ಕಾಲಕಾಲಕ್ಕೆ ಬಲ್ಬ್ ಬದಲಾಯಿಸಿ ನಗರಸಭೆ ನಿರ್ವಹಣೆ ಮಾಡುತ್ತಿತ್ತು. ಆದರೆ ಇತ್ತೀಚೆಗೆ ನಿರ್ವಹಣೆ ಕಾಣದೆ ಮಧ್ಯೆ ಮಧ್ಯೆ ಕಂಬಗಳಲ್ಲಿ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ಅಲ್ಲದೆ, ಐಜೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಿಂದ ಎಎಪಿಎಂಸಿವರೆಗೆ 20ಕ್ಕೂ ಹೆಚ್ಚಿನ ಕಂಬಗಳಲ್ಲಿ ಒಂದೇ ಒಂದೂ ಬಲ್ಬ್ ಉರಿಯುತ್ತಿಲ್ಲ.
ಕನಕಪುರ ಸರ್ಕಲ್‌ನಿಂದ ಅರ್ಚಕರಹಳ್ಳಿವರೆಗೂ ಕೆಲವು ಕಂಬಗಳಲ್ಲಿ ವಿದ್ಯುತ್ ದೀಪ ಉರಿಯುತ್ತಿಲ್ಲ. ರಾತ್ರಿ ವೇಳೆ ಈ ರಸ್ತೆ ಕತ್ತಲೆಯಿಂದ ಕೂಡಿದ್ದು ಕಾಲ್ನಡಿಗೆಯಲ್ಲಿ ಓಡಾಡುವವರಿಗೆ ಭಯ ತರಿಸುತ್ತದೆ. ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದೂ ಸಮಸ್ಯೆಗೆ ಕಾರಣವಾಗಿದೆ.
ಇದೇ ರಸ್ತೆಯಲ್ಲಿ ವಾಣಿಜ್ಯ ವ್ಯಾಪಾರ ಕೇಂದ್ರಗಳು, ಆಸ್ಪತ್ರೆಗಳು, ತಾಲೂಕು ಆಡಳಿತ ಸೌಧ ಇದೆ. ಇಂತಹ ಜನನಿಬಿಡ ರಸ್ತೆಯಲ್ಲಿ ವಿದ್ಯುತ್ ದೀಪ ಇಲ್ಲದಿರುವುದು ನಗರಸಭೆಯ ಕಾರ್ಯವೈಖರಿಯನ್ನು ಅಣಕಿಸುವಂತಿದೆ. ಕಳೆದ ಹಲವು ದಿನಗಳಿಂದ ವಿದ್ಯುತ್ ದೀಪಗಳು ಕೆಟ್ಟಿದ್ದು, ನಗರಸಭೆ ಕಣ್ಣಿಗೆ ಕತ್ತಲು ಕಂಡಿಲ್ಲವೇ ಎನ್ನುವುದು ಸಾರ್ವಜನಿಕರ ಪ್ರಶ್ನೆ.
ವಡೇರಹಳ್ಳಿಯಿಂದ ಅರ್ಚಕರಹಳ್ಳಿವರೆಗೂ ಅಲ್ಲಲ್ಲಿ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ, ಉರಿದರೂ ಪೂರ್ಣ ಪ್ರಮಾಣದ ಬೆಳಕು ಬರುತ್ತಿಲ್ಲ. ಒಂದೇ ಕಂಬದಲ್ಲಿರುವ ಎರಡು ಬಲ್ಬ್ಗಳಲ್ಲಿ ಒಂದು ಉರಿಯುತ್ತಿದ್ದರೆ ಮತ್ತೊಂದು ಕೆಟ್ಟಿದೆ. ಜತೆಗೆ ಸಾಲು ಸಾಲಾಗಿ ಕೆಲವು ಕಡೆ ದೀಪಗಳು ಉರಿಯುತ್ತಿಲ್ಲ. ಆದಾಗ್ಯೂ ನಗರಸಭೆ ವಿದ್ಯುತ್ ದೀಪ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಇದರಿಂದ ರಾತ್ರಿ ವೇಳೆ ಇದು ಜಿಲ್ಲಾ ಕೇಂದ್ರದ ನಗರದ ರಸ್ತೆಯೇ ಅಥವಾ ಕತ್ತಲ ಸಾಮ್ರಾಜ್ಯದಲ್ಲಿರುವ ಜಿಲ್ಲಾ ಕೇಂದ್ರದ ರಸ್ತೆಯೇ ಎನ್ನುವಂತಾಗಿದೆ.
ವಿದ್ಯುತ್ ಕಂಬಗಳಿಗೆ ಸರಬರಾಜಿಗಾಗಿ ಅಳವಡಿಸಿರುವ ವಿದ್ಯುತ್ ವೈರ್ ಕಂಬಗಳ ಜಾಗಗಳಲ್ಲಿ ಸಮರ್ಪಕವಾಗಿ ಜೋಡಣೆ ಆಗದೆ ಕಬ್ಬಿಣದ ಜಾಲರಿಗೆ ವೈರ್‌ಗಳು ತಗಲುತ್ತಿವೆ. ವಿದ್ಯುತ್ ದೀಪ ಸರಿಪಡಿಸುವ ಸಮಯದಲ್ಲಿ ಎಲ್ಲೆಂದರಲ್ಲಿ ಅಳವಡಿಸಿರುವ ವೈರ್‌ಗಳನ್ನು ಸೂಕ್ತ ಭದ್ರತೆ ಮಾಡಿ ಮುಂದೆ ಆಗುವ ಸಮಸ್ಯೆ ತಪ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಮಳೆ ಬಂದ ಸಂದರ್ಭದಲ್ಲಿ ಮರ ಬಿದ್ದು ವಿದ್ಯುತ್ ಸಂಪರ್ಕದಲ್ಲಿ ತೊಂದರೆ ಉಂಟಾಗಿದೆ. ಬೆಸ್ಕಾಂ ಸಿಬ್ಬಂದಿ ಶೀಘ್ರವೇ ಸಮಸ್ಯೆ ಬಗೆಹರಿಸುತ್ತಾರೆ. ಅಲ್ಲದೆ, ನಗರಸಭೆ 31 ವಾರ್ಡ್‌ಗಳಿಗೂ ಕೆಲವೇ ದಿನಗಳಲ್ಲಿ 34 ಕೋಟಿ ರೂ. ವೆಚ್ಚದ ಎಲ್‌ಇಡಿ ಬಲ್ಬ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ನಾಗೇಶ್, ಆಯುಕ್ತರು, ನಗರಸಭೆ, ರಾಮನಗರ.
ವಿದ್ಯುತ್ ದೀಪಗಳು ಉರಿಯುತ್ತಿದ್ದರೆ ಯಾವ ವಾಹನ ಓಡಾಟ ನಡೆಸುತ್ತವೆ. ಯಾರು ಓಡಾಟ ನಡೆಸುತ್ತಾರೆ. ಅಪರಾಧ ಚಟುವಟಿಕೆ ನಡೆಸುವವರರ ಬಗ್ಗೆ ಒಂದಲ್ಲ ಒಂದು ಕಡೆಯ ಸಿಸಿ ಕ್ಯಾಮರಾದಲ್ಲಿ ಸುಳಿವು ದೊರೆಯುತ್ತದೆ. ಕಳೆದ ತಿಂಗಳು ಇದೇ ರಸ್ತೆಯಲ್ಲಿ ಸರಣಿ ಕಳ್ಳತನ ಪ್ರಕರಣಗಳು ಕೂಡ ನಡೆದಿದ್ದವು. ಕೂಡಲೇ ನಗರಸಭೆ ವಿದ್ಯುತ್ ವಿದ್ಯುತ್ ದೀಪ ಸರಿ ಮಾಡಿಸಬೇಕು.
ಪ್ರಸನ್ನ, ಗಾಂಧಿನಗರ, ರಾಮನಗರ