

ಬೆಂಗಳೂರು: ಗೂಗಲ್ ಪೇ ಆ್ಯಪ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಯತ್ನಿಸಿದ ಯುವಕನೊಬ್ಬ ತನ್ನ ಖಾತೆಯಿಂದ ಹಣ ಕಳೆದುಕೊಂಡು ಮೋಸ ಹೋಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಗವಿಪುರಂ ನಿವಾಸಿ ಹರೀಶ್ ಮೋಸ ಹೋದ ಯುವಕ. ಗೂಗಲ್ ಪೇ ಓಪನ್ ಆಗದ ಹಿನ್ನೆಲೆಯಲ್ಲಿ ಗೂಗಲ್ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಾಡಿದ್ದ. ಈ ವೇಳೆ ಸಿಕ್ಕ 9901771222 ನಂಬರ್ಗೆ ಕರೆ ಮಾಡಿದ್ದ. ಆದರೆ ಆರಂಭದಲ್ಲಿ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಇದಾದ ಕೆಲವೇ ಕ್ಷಣಗಳಲ್ಲಿ 06291766339 ನಂಬರ್ನಿಂದ ಹರೀಶ್ಗೆ ಕರೆ ಬಂದಿದೆ. ಅಪರಿಚಿತನೊಬ್ಬ ಮಾತನಾಡಿ ನಿಮ್ಮ ಗೂಗಲ್ ಪೇ ಸಮಸ್ಯೆ ಆಗಿದೆ. ನಾವು ಕೇಳುವ ಮಾಹಿತಿ ನೀಡಿದರೆ ಬಗೆಹರಿಯುತ್ತೆ ಎಂದಿದ್ದಾರೆ.
ಅದನ್ನು ನಂಬಿದ ಹರೀಶ್, ಡೆಬಿಟ್ ಕಾರ್ಡ್ ನಂಬರ್, ಪಿನ್ಕೋಡ್ ಹಾಗೂ ಓಟಿಪಿಯನ್ನೂ ನೀಡಿದ್ದಾನೆ. ಬಳಿಕ ಅಪರಿಚಿತ ವ್ಯಕ್ತಿ ನಿಮ್ಮ ಗೂಗಲ್ ಪೇ ಸರಿ ಆಗಿದೆ. ಈಗ ಓಪನ್ ಮಾಡಿ ಎಂದು ಫೋನ್ ಸಂಪರ್ಕ ಕಡಿದುಕೊಂಡಿದ್ದಾನೆ.
ಇತ್ತ ಕಾಲ್ ಕಟ್ ಮಾಡಿ ನೋಡ್ತಿದ್ದಂತೆ ಅಕೌಂಟ್ನಲ್ಲಿದ್ದ 24,500 ರೂಪಾಯಿ ಮಂಗಮಾಯವಾಗಿದೆ. ಅಕೌಂಟ್ನಲ್ಲಿದ್ದ ಹಣ ಇಲ್ಲವಾದ ಬಳಿಕ ಶಾಕ್ ಆಗಿ ಮತ್ತೇ ಅದೇ ನಂಬರ್ಗೆ ಹರೀಶ್ ಕಾಲ್ ಮಾಡಿದ್ದಾರೆ. ಆದರೆ ಆ ನಂಬರ್ ಸ್ವಿಚ್ ಆಫ್ ಆಗಿದ್ದು, ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
ದಕ್ಷಿಣ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್)