ಒಗ್ಗಟ್ಟಿನ ಹೋರಾಟದಿಂದ ಗೆಲುವು, ಸಾಮಾಜಿಕ ನ್ಯಾಯ

Unity, Struggle, Victory, Social Justice,
Published on

ಚಿತ್ರದುರ್ಗ: ಅಲೆಮಾರಿ, ಅರೆ ಅಲೆಮಾರಿ ಹಾಗೂ ಹಿಂದುಳಿದ ಪ್ರವರ್ಗ 1ರಲ್ಲಿನ 46 ಸಮುದಾಯಗಳು ಒಗ್ಗೂಡಿ ಹೋರಾಟ ಮಾಡಿದಾಗ ಮಾತ್ರ ಗೆಲುವಿನ ಜತೆಗೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದು ಮುರುಘಾಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಒಕ್ಕೂಟದಿಂದ ಜಿಲ್ಲಾ ಕ್ರೀಡಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.

ಕಿನ್ನರಿ ಜೋಗಿಗಳು, ದೊಂಬಿ ದಾಸರು, ಹೆಳವರು ಒಳಗೊಂಡು ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರು ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಗೆ ಶ್ರಮಿಸಿದ್ದಾರೆ.

ಒಗ್ಗಟ್ಟಿನಿಂದ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ. ಇಲ್ಲದಿದ್ದರೆ ಉಳಿಗಾಲವಿಲ್ಲ. ಆದ್ದರಿಂದ ಜೇನು ಗೂಡಿನಂತೆ ಒಂದಾಗಿ ಎಂದು ಸಲಹೆ ನೀಡಿದರು.

ನಾನು ಅಲೆಮಾರಿ ಜನಾಂಗದವನಲ್ಲ

ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರಶೆಟ್ಟಿ ಉಳಿದೊಟ್ಟು ಮಾತನಾಡಿ, ನಾನು ಅಲೆಮಾರಿ ಜನಾಂಗದವನಲ್ಲ. ಆದರೂ ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ನಿಗಮದ ಪ್ರಥಮ ಅಧ್ಯಕ್ಷನನ್ನಾಗಿ ಮಾಡಿದ್ದರು.

ಧ್ವನಿ ಇಲ್ಲದ ಸಮುದಾಯಗಳ ಪರವಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿದೆ. ಆ ವೇಳೆ ಶೇ 95ರಷ್ಟು ಮಂದಿಯ ಸ್ಥಿತಿ ಶೋಚನೀಯ ಎಂಬುದು ತಿಳಿಯಿತು ಎಂದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎ.ನಾಗರಾಜ್, ಡಿಡಿಪಿಐ ರಾಮಪ್ಪ, ಉಪನ್ಯಾಸಕ ಗೋವಿಂದಯ್ಯ ವಿಷಯ ಮಂಡಿಸಿದರು. 46 ಜಾತಿಗಳ ವಾಸ್ತವ ಜೀವನ ಕುರಿತ ಅವರ ಅಲೆಮಾರಿ ಜೀವನ ಪುಸ್ತಕ ಬಿಡುಗಡೆಯಾಯಿತು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಶ್ರೀ ಯೋಗಿ ಸಾಗರನಾಥ್ ಮಹಾರಾಜ್, ಶ್ರೀ ಹನುಮಂತಪ್ಪ ಸ್ವಾಮೀಜಿ, ಶ್ರೀ ಬಸವ ರಮಾನಂದ ಸ್ವಾಮೀಜಿ, ಶ್ರೀ ಕರುಣಾಕರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಒಕ್ಕೂಟದ ರಾಜ್ಯ ಅಧ್ಯಕ್ಷ ತುಕಾರಾಮ ನಾಗಪ್ಪ ವಾಷರ, ಸಂಘಟನಾ ಕಾರ್ಯದರ್ಶಿ ಎಂ.ಪ್ರಕಾಶ್ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net