ವಿಶಿಷ್ಟವಾಗಿ ಸಿಂಗಾರಗೊಂಡ ಮತಗಟ್ಟೆ

25mlk-1
Published on

ಮೇಲುಕೋಟೆ: ಲೋಕಸಭಾ ಚುನಾವಣೆಗೆ ಮೇಲುಕೋಟೆ ಗ್ರಾಮ ಪಂಚಾಯಿತಿಯಲ್ಲಿ ಸಾಂಪ್ರದಾಯಿಕ ಮತಗಟ್ಟೆ ನಿರ್ಮಾಣಗೊಂಡಿದ್ದು, ಮತದಾರರನ್ನು ಆಕರ್ಷಿಸುತ್ತಿದೆ.

ತಳಿರು- ತೋರಣ, ಹಸಿರು ಚಪ್ಪರ ಹಾಗೂ ಮೇಲುಕೋಟೆ ದೇವಾಲಯ, ಸ್ಮಾರಕಗಳ ಚಿತ್ರಗಳು, ಜಾನಪದ ಕಲಾಚಿತ್ರಗಳೊಂದಿಗೆ ಭಾಗದ ಸಂಖ್ಯೆ 29ರ ಮತಗಟ್ಟೆ ಸಿಂಗಾರಗೊಂಡಿದೆ. ಮತದಾರರನ್ನು ಸ್ವಾಗತಿಸಲು ಕದಲಗೆರೆಯ ಜನಪದ ಕಲಾವಿದ ಶಿವಣ್ಣಗೌಡರ ರಾಜಾರಾಣಿ ಗೊಂಬೆಗಳನ್ನು ಇಡಲಾಗಿದೆ. ಈ ಮತಗಟ್ಟೆಯಲ್ಲಿ ಬಹುತೇಕ ಮತದಾರರು ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಾಲಯದಲ್ಲಿ ಸೇವೆ ಸಲ್ಲಿಸುವ ಕೈಂಕರ್ಯಪರರಾಗಿದ್ದು ಇದೇ ಮತಗಟ್ಟೆಗೆ ಸಾಂಪ್ರದಾಯಿಕ ಮತಗಟ್ಟೆಯ ಸ್ಥಾನ ಕಲ್ಪಿಸಿರುವ ಚುನಾವಣಾ ಆಯೋಗದ ಕ್ರಮವನ್ನು ಮತದಾರರು ಸ್ವಾಗತಿಸಿದ್ದಾರೆ.

ಪರಿಶೀಲನೆ: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲೋಕೇಶಮೂರ್ತಿ ಗುರುವಾರ ಮತಗಟ್ಟೆಗೆ ನೀಡಿ ಪರಿಶೀಲಿಸಿದರು. ಮತದಾರರನ್ನು ಸೆಳೆಯಲು ಪಾಂಡವಪುರ ತಾಲೂಕಿನಾದ್ಯಂತ ಹತ್ತು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರಮುಖ ಪ್ರವಾಸಿ ತಾಣ ಮೇಲುಕೋಟೆ ಮತ್ತು ಕುಂತಿಬೆಟ್ಟದ ತಪ್ಪಲಿನ ಗ್ರಾಮ ಚಿಕ್ಕಾಡೆಯಲ್ಲಿ ಸಾಂಪ್ರದಾಯಿಕ ಮತಗಟ್ಟೆ, ಮಹಿಳಾ ಮತದಾರರಿಗಾಗಿ ಪಾಂಡವಪುರ ವಿಜಯ ಕಾಲೇಜು, ಪಿಇಎಸ್ ಕಾಲೇಜು ಬನ್ನಂಗಾಡಿ, ಕೆರೆತೊಣ್ಣೂರು, ಲಕ್ಷ್ಮೀಸಾಗರದಲ್ಲಿ ಪಿಂಕ್ ಮತಗಟ್ಟೆಗಳು, ಡಾಮರಹಳ್ಳಿ ಹುಲಿಕೆರೆಯಲ್ಲಿ ಯುವ ಮತಕೇಂದ್ರ, ಅಂಗವಿಕಲರು ಹೆಚ್ಚಾಗಿರುವ ನಾರಾಯಣಪುರದಲ್ಲಿ ಅಂಗವಿಕಲರ ಮತಕೇಂದ್ರ, ದೊಡ್ಡಬ್ಯಾಡರಹಳ್ಳಿಯಲ್ಲಿ ಆಲೆಮನೆ ರೀತಿಯ ಥೀಮ್ ಮತಗಟ್ಟೆ ನಿರ್ಮಿಸಲಾಗಿದೆ. ಈ ಎಲ್ಲ ಮತಗಟ್ಟೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ತಾಲೂಕಿನ ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳು ಸೇರಿದಂತೆ ಎಲ್ಲ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದರು. ಪಿಡಿಒ ರಾಜೇಶ್ವರ್, ಬಿಎಲ್‌ಒ ಸಂತಾನರಾಮನ್, ಮತದಾನಾಧಿಕಾರಿ ಎಚ್.ಸಿ ಮಂಜು, ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net