

ಹರೀಶ್ ಬೇಲೂರು ಬೆಂಗಳೂರು
ಸ್ಥಗಿತವಾದ,ನವೀಕರಣವಾಗದ, ವಿವಾದ ಹೊಂದಿರುವ ಮದ್ಯದಂಗಡಿಗಳನ್ನು ಬೇಕಾಬಿಟ್ಟಿ ಮಾರಾಟ ತಡೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮದ ಸಹಯೋಗದಲ್ಲಿ ಅಬಕಾರಿ ಇಲಾಖೆ, ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದೆ.
ರಾಜ್ಯಾದ್ಯಂತ 3,988 ವೈನ್ಶಾಪ್ (ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ (ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್-7), 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,634 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್ಐಎಲ್ (ಸಿಎಲ್11ಸಿ) ಮತ್ತು 745 ಆರ್ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿದ್ದು, ಇವುಗಳಿಂದ ಪ್ರತಿನಿತ್ಯ ಸರ್ಕಾರದ ಬೊಕ್ಕಸಕ್ಕೆ 60&70 ಕೋಟಿ ರೂ.ನಂತೆ ವರ್ಷಕ್ಕೆ 40 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ. ಹಾಗಾಗಿ, ಅಬಕಾರಿ ಸೇವೆಗಳನ್ನು ಜನಸ್ನೇಹಿಯಾಗಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿಧದ ಮದ್ಯದಂಗಡಿಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಮದ್ಯದಂಗಡಿಗಳ ಹೆಸರು, ಮಾಲೀಕರ ಹೆಸರು, ಕಾರ್ಯನಿರ್ವಹಣೆ ಮಾಡುತ್ತಿರುವ ಸ್ಥಳ, ಪರವಾನಗಿ ನವೀಕರಣ, ಯಾವಾಗ ಬಾರ್ಗಳ ಆರಂಭವಾಗಿರುವುದೂ ಸೇರಿ ಇತರೆ ಮಾಹಿತಿಗಳನ್ನು ತಂತ್ರಾಂಶದಲ್ಲಿ ನಮೂದಿಸಲಾಗುತ್ತದೆ.
ಎಲ್ಲ ಮಾಹಿತಿ ಲಭ್ಯ:
ಪ್ರಾಥಮಿಕ ಹಂತದಲ್ಲಿ ಮದ್ಯದಂಗಡಿ ನವೀಕರಣ, ವರ್ಗಾವಣೆ ಸೇರಿ ಇತರೆ ಸೇವೆಗಳು ದೊರೆಯಲಿವೆ. ಹಂತ ಹಂತವಾಗಿ ಇಲಾಖೆಯ ಎಲ್ಲ ಸೇವೆಗಳು ಸಿಗಲಿವೆ. ಬಾರ್ಗಳ ನವೀಕರಣಕ್ಕೆ ಈಗಾಗಲೆ ಆನ್ಲೈನ್ನಲ್ಲಿದ್ದರೂ ದಾಖಲೆಗಳನ್ನು ಮ್ಯಾನ್ಯುವಲ್ ಆಗಿ ಸಲ್ಲಿಸಬೇಕಿತ್ತು. ನವೀಕರಣ ಪ್ರಕ್ರಿಯೆ ಮುಗಿಯಲು ಒಂದು ತಿಂಗಳು ಬೇಕಾಗುತ್ತಿತ್ತು. ಇದೀಗ ತಂತ್ರಾಂಶವನ್ನು ಪರಿಷ್ಕರಿಸಿ ಅಭಿವೃದ್ಧಿಪಡಿಸಿರುವ ಹಿನ್ನೆಲೆ ಮುರ್ನಾಲ್ಕು ದಿನದಲ್ಲೇ ನವೀಕರಣ ಪ್ರಕ್ರಿಯೆ ಪೂರ್ಣಗೊಳುತ್ತದೆ. ತಂತ್ರಾಂಶದಲ್ಲಿ ಬಳಕೆದಾರ ಆಧಾರಿತ ಸೇವೆ (ಯೂಸರ್ ಬೇಸ್ಡ್ ಸರ್ವೀಸ್) ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಮದ್ಯದಂಗಡಿಗೆ ಕೊಟ್ಟಿರುವ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ನಮೂದಿಸಿದರೆ ಬಾರ್ ಮಾಲೀಕರು ಯಾರು ಸೇರಿ ಇತರೆ ಸಂಪೂರ್ಣ ವಿವರ ಸಿಗಲಿದೆ. ಮದ್ಯದಂಗಡಿಗಳ ವರ್ಗಾವಣೆ, ಸನ್ನದುಗಳ ನವೀಕರಣ, ಸ್ಥಳಾಂತರ ಸೇರಿ ಇತರೆ ಅಬಕಾರಿ ಸೇವೆಗಳೂ ಸುಲಭವಾಗಿ ಲಭ್ಯವಾಗಲಿದೆ. ಸ್ಥಗಿತವಾದ ಮದ್ಯದಂಗಡಿಗಳನ್ನು ಕಾಳಸಂತೆಯಲ್ಲಿ ಮದ್ಯವರ್ತಿಗಳು ಮಾರಾಟ ಮಾಡುವ ದಂಧೆಗೂ ಕಡಿವಾಣ ಬೀಳಲಿದೆ.
ಏನೇನು ಸೇವೆ ಲಭ್ಯ
ಡಿಸ್ಟಿಲರಿ, ಬ್ರೆವರಿ, ಮೈಕ್ರೋಬ್ರೆವರಿ, ವೈನರಿ, ಮದ್ಯದಂಗಡಿಗಳ ಸನ್ನದುಗಳ ನವೀಕರಣ ಮತ್ತು ವರ್ಗಾವಣೆ, ಮದ್ಯಸಾರ ಆಮದಿಗೆ, ರಪ್ತಿಗೆ ನಿರಾಕ್ಷೇಪಣಾ ಪತ್ರ, ಮದ್ಯ ರಪ್ತು (ಹೊರದೇಶಕ್ಕೆ) ಸಹಮತಿ ಪತ್ರ, ವೈನ್ ರಪ್ತು (ಹೊರ ದೇಶಕ್ಕೆ) ಸಹಮತಿ ಪತ್ರ, ಸ್ಥಳಿಯ ಲೇಬಲ್ ಅನುಮೋದನೆ, ಡಿಪಿ,ಎಂಆರ್ಪಿ ಮತ್ತು ಆರ್ಎಂಆರ್ಪಿ, ಹೊರ ರಾಜ್ಯದ ಲೇಬಲ್ ಅನುಮೋದನೆ, ಕಾಕಂಬಿ ಸನ್ನದು, ರಾಜ್ಯದಲ್ಲಿ ಕಾಕಂಬಿ ಎತ್ತುವಳಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ, ಕಾಕಂಬಿ ಬ್ಯಾಂಕ್ ಅಳವಡಿಸುವ ಬಗ್ಗೆ, ಅಂತಾರಾಜ್ಯ ಕಾಕಂಬಿ ಎತ್ತುವಳಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ, ಹೊರ ದೇಶದ ಲೇಬಲ್ ಅನುಮೋದನೆ, ಪ್ರಾಥಮಿಕ ಡಿಸ್ಟಲರಿ, ಮದ್ಯ ಉತ್ಪಾದನಾ ಡಿಸ್ಟಲರಿ, ವೈನರಿಗೆ ಮದ್ಯಸಾರ ಹಂಚಿಕೆ, ಮದ್ಯ, ವೈನ್ ಮತ್ತು ಬಿಯರ್ ರಪ್ತುಗೆ ಸಹಮತಿ ಪತ್ರ, ಸ್ಥಗಿತಗೊಂಡ ಸನ್ನದುಗಳ ನವೀಕರಣ, ಸನ್ನದುಗಳ ಮಂಜೂರಾತಿ,ವಿಶೇಷ ಸಾಂದರ್ಭಿಕ ಸನ್ನುದುಗಳ ಮಂಜೂರಾತಿ ಸಂಬಂಧಿಸಿದಂತೆ ಸೇವೆಗಳು ದೊರೆಯಲಿವೆ.
ಲಂಚಕ್ಕೆ ಬ್ರೇಕ್
ಪ್ರತಿ ವರ್ಷ ಜೂನ್ನಲ್ಲಿ ಮದ್ಯದಂಗಡಿಗಳ ನವೀಕರಣ ಪ್ರಕ್ರಿಯೆ ನಡೆಯುತ್ತದೆ. ಬಾರ್ಗಳ ನವೀಕರಣಕ್ಕಾಗಿ ಮದ್ಯದಂಗಡಿ ಮಾಲೀಕರು ಆಯಾ ವ್ಯಾಪಿಯ ಅಬಕಾರಿ ನಿರೀಕ್ಷಕರ ಕಚೇರಿಗೆ ಅರ್ಜಿ ಸಲ್ಲಿಸುತ್ತಾರೆ. ಮಾಲೀಕರು ಸಲ್ಲಿಸಿರುವ ನವೀಕರಣ ಅರ್ಜಿಯನ್ನು ಅಬಕಾರಿ ನಿರೀಕ್ಷಕರು ಪರಿಶೀಲಿಸಿದ ಬಳಿಕ ಲಾಂತರ ರೂ. ಬೇಡಿಕೆ ಇಟ್ಟು ಲಂಚ ತೆಗೆದುಕೊಂಡು ಬಳಿಕವೇ ಜಿಲ್ಲಾ ಉಪ ಆಯುಕ್ತರಿಗೆ ಕಳುಹಿಸುತ್ತಾರೆ. ಆಮೇಲೆ ಉಪ ಆಯುಕ್ತರು ಇವುಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗೆ ತಲುಪಿಸುತ್ತಾರೆ. ಅಂತಿಮವಾಗಿ ಡಿಸಿ ಅಂತಿಮ ಮುದ್ರೆ ಹಾಕಿ ನವೀಕರಣ ಮಾಡುತ್ತಾರೆ. ಈ ಪ್ರಕ್ರಿಯೆ ನಡೆಯಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತಿತ್ತು. ನವೀಕರಣ ವೇಳೆ ಅಧಿಕಾರಿಗಳು ಚೆಕ್ಲೀಸ್ಟ್ ಮಾಡಿಕೊಂಡು ಅಬಕಾರಿ ಇಲಾಖೆಯ ರೂಲ್-5 ಪ್ರಕಾರ ಆಕ್ಷೇಪಣಾ ಸ್ಥಳಗಳಲ್ಲಿರುವ ಮದ್ಯದಂಗಡಿಗಳ ನವೀಕರಣವನ್ನು ರದ್ದುಗೊಳಿಸಬೇಕು. ದೇವಸ್ಥಾನ, ಶಾಲಾ& ಕಾಲೇಜುಗಳು, ವಸತಿ ಪ್ರದೇಶ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ವಾಸ ಮಾಡುವ ಪ್ರದೇಶದಿಂದ 100 ಮೀಟರ್ನೊಳಗೆ ಬರುವ ಮದ್ಯದಂಗಡಿಗಳ ಲೈಸನ್ಸ್ ನವೀಕರಣಕ್ಕೆ ಅವಕಾಶ ಇರುವುದಿಲ್ಲ. ಆದರೆ, ಅಧಿಕಾರಿಗಳು ಬಾರ್ ಮಾಲೀಕರಿಂದ ಲಂಚ ತೆಗೆದುಕೊಂಡು ನಿಯಮಗಳನ್ನು ಉಲ್ಲಂಘಿಸಿ ತಪು$್ಪ ಮಾಹಿತಿ ನಮೂದಿಸಿ ಬಾರ್ಗಳ ನವೀಕರಣ, ಸ್ಥಳಾಂತರ ಮಾಡುವ ವಿಚಾರದಲ್ಲಿ ಲಾಂತರ ರೂಪಾಯಿ ಬಾಚಿಕೊಳ್ಳುವ ಅಧಿಕಾರಗಳ ಲಂಚಬಾಕತನ ತಡೆಗೆ ಬ್ರೇಕ್ ಬೀಳುತ್ತದೆ.
ಇಲಾಖೆಯ ಸೇವೆ ಪಡೆಯಲು ಸಾಕಷ್ಟು ಬಾರಿ ಅಲೆದಾಡಿದ್ದರೂ ಕೆಲಸವಾಗುತ್ತಿರಲಿಲ್ಲ. ಇದೀಗ ಅಬಕಾರಿ ಇಲಾಖೆ ಸಂಪೂರ್ಣ ಡಿಜಿಟಲೀಕರಣವಾಗುತ್ತಿದೆ. ಇದರಿಂದಾಗಿ ನಮಗೆ ತುಂಬ ಅನುಕೂಲವಾಗಲಿದೆ. 3 ದಿನದಲ್ಲೇ ಮದ್ಯದಂಗಡಿ ನವೀಕರಣ ಪತ್ರ ದೊರೆಯಲಿದೆ.
| ಗೋವಿಂದರಾಜು ಹೆಗಡೆ, ಪ್ರಧಾನ ಕಾರ್ಯದರ್ಶಿ.
ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್.