ಬಾಕಿ ಬಿಲ್​ಗಳಿಗೆ ಅನುದಾನ ಬಿಡುಗಡೆ ಮಾಡಿ:ಸತೀಶ್​ ಜಾರಕಿಹೊಳಿಗೆ ಗುತ್ತಿಗೆದಾರ ಸಂಘ ಮನವಿ

SATHISH
Published on

ಬೆಂಗಳೂರು:ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕೋಟ್ಯಂತರ ರೂಪಾಯಿ ಬಿಲ್​ಗಳಿಗೆ ಹಣ ಬಿಡುಗಡೆ ಮಾಡುವ ಸಂಬಂಧ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸಚಿವ ಸತೀಶ್​ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​, ಪೌರಾಡಳಿತ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಸಣ್ಣ ನೀರಾವರಿ, ಮಹಾನಗರ ಪಾಲಿಕೆಯಲ್ಲಿ ಕೋಟ್ಯಂತರ ರೂ.ಬಿಲ್​ಗಳಿಗೆ ಹಲವು ವರ್ಷಗಳಿಂದ ಹಣ ಪಾವತಿಯಾಗದೆ ಗುತ್ತಿಗೆದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಜ್ಯೇಷ್ಠತೆ ಆಧಾರದ ಮೇರೆಗೆ ಅನುದಾನ ಬಿಡುಗಡೆ ಮಾಡಬೇಕು. ಸಮಸ್ಯೆ ಬಗೆಹರಿಸಲು ಸಂಘದ ಅಧ್ಯಕ್ಷ (ಪ್ರಭಾರ) ಜಗನ್ನಾಥ್​ ಬಿ.ಶೇಗಜಿ ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂದ ಅಧ್ಯಕ್ಷ ಜೆ.ಎಂ.ನಂದಕುಮಾರ್​ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿ ಮಾಡಿಕೊಂಡರು. ಇದೇ ವೇಳೆ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು. ಉಪಾಧ್ಯಕ್ಷ ಎನ್​.ಮಂಜುನಾಥ್​, ಕಾರ್ಯಾಧ್ಯಕ್ಷರಾದ ಆರ್​. ಮಂಜುನಾಥ್​, ಶಂಕರ್​ಗೌಡ ಶಾನಿ ಸೇರಿ ಸಂಘದ ಪದಾಧಿಕಾರಿಗಳು ಮತ್ತಿತರರಿದ್ದರು.

6 ಇಲಾಖೆಗಳಿಗೆ ಎಚ್ಚರಿಕೆ ಪತ್ರ:

ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​, ಜಲಸಂಪನ್ಮೂಲ, ವಸತಿ, ಪೌರಾಡಳಿತ, ಸಣ್ಣ ನೀರಾವರಿ ಇಲಾಖೆಗಳವರು ಗುತ್ತಿಗೆದಾರರ ಬೇಡಿಕೆ ಬಗ್ಗೆ ಗಮನಕೊಟ್ಟಿಲ್ಲ. ಹೀಗಾಗಿ, ಗುರುವಾರ ಮತ್ತೆ ಪತ್ರ ಬರೆದಿದ್ದು, ವಾರದೊಳಗೆ ಗಮನ ಕೊಡಬೇಕೆಂದು ಕೋರಿದ್ದೇವೆ. ಒಂದೊಮ್ಮೆ ಮನವಿಗೆ ಸ್ಪಂದಿಸದೇ ಹೋದರೆ ನಮ್ಮ ದಾರಿ ನಮ್ಮದು ಎಂದು ಜಗನ್ನಾಥ್​ ಬಿ.ಶೇಗಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅನಗತ್ಯ ನಿಯಮ ಹೇರಿ ಸ್ಥಳಿಯ ಗುತ್ತಿಗೆದಾರರನ್ನು ಅನರ್ಹಗೊಳಿಸಿ ಬೇರೆ ರಾಜ್ಯದ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹಲವು ಕಾಮಗಾರಿಗಳನ್ನು ಒಗ್ಗೂಡಿಸಿ ಪ್ಯಾಕೇಜ್​ ಪದ್ಧತಿಯಲ್ಲಿ ಟೆಂಡರ್​ ಕರೆಯಲಾಗುತ್ತಿದೆ. ಇದರಿಂದಾಗಿ ಮಧ್ಯಮ ವರ್ಗದ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಪ್ಯಾಕೇಜ್​ ಟೆಂಡರ್​ ಪದ್ಧತಿ ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ಸಭೆ ನಡೆಸಿದ ಸಚಿವರು:

ವಿಕಾಸಸೌಧ ಸಭಾಂಗಣದಲ್ಲಿ ಸತೀಶ್​ ಜಾರಕಿಹೊಳಿ ಅವರು, ಉನ್ನತ ಅಧಿಕಾರಿಗಳು ಹಾಗೂ ಸಂಘದ ಪ್ರತಿನಿಧಿಗಳ ಜತೆ ಸಭೆ ನಡೆಸಿ ಕೆಲ ತೀರ್ಮಾನ ಕೈಗೊಂಡರು. ಇಲಾಖೆಯಲ್ಲಿ 2023ರವರೆಗಿನ ಎಲ್ಲ ವಿಜಿ ಬಿಲ್​ಗಳ ಹಣ ನೀಡುವುದು, ಎಂಡಿಪಿ ವಿಚಾರದಲ್ಲಿ ರಾಯಲ್ಟಿ ಮತ್ತು ಹೆಚ್ಚುವರಿ ಮೊತ್ತವನ್ನು ಇಲಾಖೆ ಭರಿಸಲು ತೀರ್ಮಾನಿಸಲಾಯಿತು. 5 ಪಟ್ಟು ದಂಢ ವಿಧಿಸದಂತೆ, ವ್ಯಾಟ್​, ಜಿಎಸ್​ಟಿ ವ್ಯತ್ಯಾಸದ ಬಗ್ಗೆ ಓಡಿಶಾ ಅಥವಾ ಕೇರಳ ಮಾದರಿ ಅನುಸರಿಸಿ ಫೆ.15ರೊಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು, ಎಫ್​​​​ಎಸ್​ಡಿ ಅನ್ನು ಶೇ.5ರಿಂದ ಶೇ.3ಕ್ಕೆ ಇಳಿಸುವುದು, ಕೆಲಸ ಮುಗಿದ ಪ್ರಮಾಣಪತ್ರ 10 ವರ್ಷಕ್ಕೆ ವಿಸ್ತರಿಸುವುದು ಮತ್ತು ರದ್ದಾದ ಪರವಾನಗಿ ಮರು ಸ್ಥಾಪಿಸಲು ಸಚಿವರು, ಅಧಿಕಾರಿಗಳಿಗೆ ಸೂಚಿಸಿದರು.

ಹಿಂದಿನ ಸರ್ಕಾರದ ಬಾಕಿ ತೀರಿಸಲು 14 ಸಾವಿರ ಕೋಟಿ ರೂ.ಒಂದೇ ಬಾರಿಗೆ ಎಲ್ಲಿಂದ ತರುವುದು. ಬಜೆಟ್​ ಅನುದಾನ ಹೊರತಾಗಿ ಕಾರ್ಯಾದೇಶ ಮಾಡಿದ್ದಾರೆ. ಗುತ್ತಿಗೆದಾರರು ಕಾಮಗಾರಿ ಮಾಡಿದ್ದಾರೆ. ಗುತ್ತಿಗೆದಾರರದ್ದೂ ತಪ್ಪಿಲ್ಲ. ನಾವು ಸಮಸ್ಯೆ ಪರಿಹಾರ ಮಾಡಬೇಕಿದ್ದು, ದಾರಿ ಹುಡುಕುತ್ತಿದ್ದೇವೆ.

| ಸತೀಶ್​ ಜಾರಕಿಹೊಳಿ, ಸಚಿವ

ಗುತ್ತಿಗೆದಾರರ ಮೇಲಿನ ದ್ವೇಷದಿಂದ ಟೆಂಡರ್​ ಪ್ರೀಮಿಯಂ ಅನ್ನು ಶೇ.5ಕ್ಕೆ ಸೀಮಿತಗೊಳಿಸಲಾಗಿದೆ. ಇದರಿಂದಾಗಿ ದರಗಳನ್ನು ನಮೂದಿಸುವ ಗುತ್ತಿಗೆದಾರರ ಅಧಿಕಾರ ಮೊಟಕುಗೊಂಡಿದೆ. ಅದನ್ನು ಮೊದಲಿನಂತೆ ಶೇ.15ಕ್ಕೆ ಹೆಚ್ಚಿಸಬೇಕು.

| ಜಿ.ಎಂ.ರವೀಂದ್ರ. ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net