ಸಣ್ಣ ಉದ್ದಿಮೆದಾರರಿಗೆ ಕೇಂದ್ರದ ಪ್ರೋತ್ಸಾಹ; ಶೋಭ ಕರಂದ್ಲಾಜೆ ಭರವಸೆ, ಸಣ್ಣ ಉದ್ದಿಮೆದಾರರ ಒಕ್ಕೂಟ ಅಸ್ತಿತ್ವಕ್ಕೆ

msme
Published on

ಬೆಂಗಳೂರು: ಕೇಂದ್ರ ಸರ್ಕಾರ ಸಣ್ಣ ಉದ್ದಿಮೆದಾರರಿಗೆ ಅನುಕೂಲ ಕಲ್ಪಿಸಲು ಸಹಕಾರ ನೀಡುತ್ತಿದ್ದು, ಇದರಿಂದ ಹೊಸ ಹೊಸ ಉದ್ಯಮಗಳು ಆರಂಭವಾಗಿವೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ವಿಜಯನಗರದ ಬಂಟರ ಸಂಘದ ಆವರಣದಲ್ಲಿ ಕರ್ನಾಟಕ ರಾಜ್ಯ ಬೇಕರಿ, ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸಂಘದ ಉದ್ಘಾಟನೆ, ಕಾರ್ಯಾಗಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬೇಕರಿ, ಕಾಂಡಿಮೆಂಟ್ಸ್ ಮತ್ತಿತರ ಸಣ್ಣ ಉದ್ದಿಮೆಗಳಲ್ಲಿ ದಕ್ಷಿಣ ಕರ್ನಾಟಕ ಭಾಗದವರು ಹೆಚ್ಚು ತೊಡಗಿಸಿಕೊಂಡಿದ್ದಾರೆ. ದೇಶದಲ್ಲಿ 6 ಕೋಟಿ 60ಲಕ್ಷ ಜನ ಉದ್ದಿಮೆದಾರರು ಇದ್ದಾರೆ. ಅದರಲ್ಲಿ ಶೇ. 45ರಷ್ಟು ತೆರಿಗೆ ಪಾವತಿ ಮಾಡುತ್ತಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯವರು ನೀಡಿರುವ ಮಾಹಿತಿ ಪ್ರಕಾರ ಬೇಕರಿ, ಕಾಂಡಿಮೆಂಟ್ಸ್ ಮತ್ತಿತರ ಸಣ್ಣ ಉದ್ದಿಮೆದಾರರ ನೋಂದಣಿ ಮಾಡಿಕೊಳ್ಳಬೇಕು. ಆಗ ಅವರಿಗೆ ಕಾರ್ಯಗಾರಗಳ ಮೂಲಕ ಇನ್ನೂ ಹೆಚ್ಚಿನ ಅರಿವು ಮೂಡಿಸಲು ಸಾಧ್ಯ. ಬೇಕರಿ, ಕಾಂಡಿಮೆಂಟ್ಸ್‌ನವರು ಎದುರಿಸುತ್ತಿರುವ ಜಿ.ಎಸ್.ಟಿ. ಸಮಸ್ಯೆ ಕುರಿತು ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಜಯಪ್ರಕಾಶ್ ಹೆಗಡೆ, ಶಾಸಕರುಗಳಾದ ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳಿ, ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷರಾದ ಜಿ.ಕೆ.ಶೆಟ್ಟಿ , ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ, ಶಿವಾನಂದ ಶೆಟ್ಟಿ , ಕರಕುಶಲ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಸಂಘದ ರಾಜ್ಯಾಧ್ಯಕ್ಷ ಡಿ.ಬಿ.ಪ್ರತಾಪ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು. ನಂತರ ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

" ಇತ್ತೀಚೆಗೆ ಅವೈಜ್ಞಾನಿಕವಾಗಿ ಬೇಕರಿ, ಕಾಂಡಿಮೆಂಟ್ಸ್, ಸಣ್ಣ ಉದ್ದಿಮೆದಾರರ ಮೇಲೆ ಲಕ್ಷಾಂತರ ರೂಪಾಯಿ ತೆರಿಗೆ ವಿಧಿಸಿದ್ದಾರೆ. ಇದನ್ನ ಖಂಡಿಸಿ ನಮ್ಮ ಸಂಘವು ಹೋರಾಟ ಮಾಡಿದ ನಂತರ ಮುಖ್ಯಮಂತ್ರಿಗಳು ಮನ್ನಾ ಮಾಡಿದರು." -ಡಿ.ಬಿ.ಪ್ರತಾಪ್ ಶೆಟ್ಟಿ, ರಾಜ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net