ಅಲೆಮಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪ

HUN-JULY-26-3(K M VADI ALEMARI MEMORENDUM)
ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದ ಅಲೆಮಾರಿ ಕುಟುಂಬಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್ ಜೆ.ಮಂಜುನಾ ಅವರಿಗೆ ಮನವಿ ಸಲ್ಲಿಸಿದವು. ನಿಂಗರಾಜ ಮಲ್ಲಾಡಿ, ಪುಷ್ಪ, ಗೌರಮ್ಮ, ದೇವೇಂದ್ರ, ಗಜೇಂದ್ರ, ರಾದಾ, ವೆಲ್ಲಿಯಮ್ಮ, ಶಿವು ಮುಂತಾದವರು ಇದ್ದಾರೆ.
Published on

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ವಾಸವಿರುವ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ನಿವೇಶನಗಳನ್ನು ಕೊಡಬಾರದೆಂದು ಆಗ್ರಹಿಸಿ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿರುವವರ ವಿರುದ್ಧ ಕ್ರಮವಹಿಸುವಂತೆ ಕಟ್ಟೆಮಳಲವಾಡಿ ಗ್ರಾಮದ ಅಲೆಮಾರಿ ಕುಟುಂಬದವರು ಶುಕ್ರವಾರ ತಹಸೀಲ್ದಾರ್ ಜೆ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಲೆಮಾರಿ ಕುಟುಂಬದ ಶಿವು, ಕಟ್ಟೆಮಳವಾಡಿ ಗ್ರಾಮದ ಹಾರಂಗಿ ದಂಡೆಯ ಪಕ್ಕದ ಗ್ರಾಮ ಠಾಣೆಯಲ್ಲಿ ಗುಡಿಸಲು ಹಾಕಿಕೊಂಡು ಕಳೆದ 40 ವರ್ಷಗಳಿಂದಲೂ ವಾಸ ಮಾಡುತ್ತಿದ್ದೇವೆ. ನಮ್ಮ ಹಿರಿಯರಿಗೆ ಏಳು ಮನೆಗಳನ್ನು ಗಿರಿಜನ ಕಲ್ಯಾಣ ಇಲಾಖೆ ವತಿಯಿಂದ ಕಟ್ಟಿಸಿ ಕೊಟ್ಟಿರುತ್ತಾರೆ. ಉಳಿದ ಕುಟುಂಬಗಳು ಗುಡಿಸಲುಗಳನ್ನು ಹಾಕಿಕೊಂಡು ಯಾವುದೇ ಮೂಲಸೌಲಭ್ಯಗಳಿಲ್ಲದೆ ಅತ್ಯಂತ ಸಂಕಷ್ಟದ ಜೀವನವನ್ನು ಸಾಗಿಸುತ್ತಿದ್ದೇವೆ. ಕಟ್ಟೆಮಲಳವಾಡಿ ಗ್ರಾಮದ ಕೆಲವು ಮುಖಂಡರು ನಮ್ಮ ವಿರುದ್ಧ ಕಳ್ಳತನ ಮಾಡುತ್ತಾರೆ, ಗಾಂಜಾ ಮಾರಾಟ ಮಾಡುತ್ತಾರೆ, ಗ್ರಾಮದಲ್ಲಿ ಅಶಾಂತಿ ಉಂಟು ಮಾಡುತ್ತಾರೆ ಮತ್ತು ಅಕ್ರಮ ಚಟುವಟಿಕೆಗಳನ್ನು ಎಸಗುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಾಗೆ ನಾವು ಕಳ್ಳತನ ಮಾಡುತ್ತಿದ್ದೇವೆ, ಅಕ್ರಮ ಮಾಡುತ್ತಿದ್ದೇವೆ ಎನ್ನುವುದಾದರೆ ನಮ್ಮ ಮೇಲೆ ಪೊಲೀಸರಿಂದಲೇ ಕ್ರಮವಾಗಲಿ. ಇಲ್ಲದಿದ್ದರೆ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ಮುಖಂಡರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಲೆಮಾರಿ ಕುಟುಂಬದ ಗೌರಿ, ರಾಜಮ್ಮ ಮುಂತಾದವರು ತಮ್ಮ ಅಳಲನ್ನು ತೋಡಿಕೊಂಡರು. ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಜೆ.ಮಂಜುನಾಥ್ ಈ ಬಗ್ಗೆ ದೂರು ಪ್ರತಿದೂರುಗಳು ಬರುತ್ತಿದ್ದು, ನನ್ನ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಸ್ಥಳ ತನಿಖೆಗೆ ಕಳುಹಿಸಿ ಸತ್ಯಾಸತ್ಯತೆ ಪರಿಶೀಲಿಸಿ ನಿಜವಾದ ಬಡ ಕುಟುಂಬಗಳಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ದಲಿತ ಮುಖಂಡರಾದ ನಿಂಗರಾಜ್ ಮಲ್ಲಾಡಿ, ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಚಿಲ್ಕುಂದ ವೇಣುಗೋಪಾಲ, ಕಟ್ಟೆಮಳಲವಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಆಂಜನೇಯ, ಎಸ್ ಗಣೇಶ, ಮಾಜಿ ಸದಸ್ಯರಾದ ದೇವರಾಜು, ಮುಖಂಡರಾದ ತಾಂಡುಮೂರ್ತಿ, ವೆಂಕಟೇಶ, ಸತೀಶ, ಗಣೇಶ, ಪ್ರಭಾಕರ, ಮಹಿಳೆಯರಾದ ನಾಗಮ್ಮ ಶಿವ, ಲಕ್ಷ್ಮಿ, ಮಂಗಳ, ಮಲ್ಲಿಗೆ, ವೆಲ್ಲಿಯಮ್ಮ ರಾಧಾ, ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net