ನಿರೀಕ್ಷೆ ಕಾಣದ ನೈರ್ಮಲ್ಯ ಸುಧಾರಣೆ

25CBP1A (1)
ಚಿಕ್ಕಬಳ್ಳಾಪುರದ ಚರಂಡಿಗಳಲ್ಲಿ ಕಸದ ರಾಶಿ.
Published on


ಖಾಲಿ ನಿವೇಶನಗಳ ನಿರ್ವಹಣೆಗೆ ಮಾಲೀಕರ ನಿರ್ಲಕ್ಷ್ಯ- ಸ್ಥಳೀಯ ಆಡಳಿತದಿಂದ ಜಾಣಕುರುಡು ಪ್ರದರ್ಶನ

ಚಿಕ್ಕಬಳ್ಳಾಪುರ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ವಿವಿಧ ಇಲಾಖೆಗಳಿಗೆ ಸಲಹೆ ಸೂಚನೆ ನೀಡಲಾಗುತ್ತಿದೆ. ಇದರ ನಡುವೆಯೂ ಜಿಲ್ಲಾ ಕೇಂದ್ರದಲ್ಲಿ ನೈರ್ಮಲ್ಯ ಸುಧಾರಣೆ ನಿರೀಕ್ಷೆಗೆ ತಕ್ಕಂತೆ ಆಗುತ್ತಿಲ್ಲ.

ಹೌದು! ಬಹುತೇಕ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಖಾಲಿ ನಿವೇಶನಗಳಲ್ಲಿ ತ್ಯಾಜ್ಯ, ಗಿಡಗಳು, ಪ್ರಮುಖ ರಸ್ತೆಗಳಲ್ಲಿ ಕಣ್ಣಿಗೆ ರಾಚುವ ತ್ಯಾಜ್ಯದ ರಾಶಿ, ನೀರು ನಿಲ್ಲುವ ಸ್ಥಳಗಳ ಹೆಚ್ಚಳ ಸೇರಿ ಹಲವೆಡೆ ಹದಗೆಟ್ಟ ಪರಿಸ್ಥಿತಿ ಇದ್ದು ಸೊಳ್ಳೆಗಳ ಕಾಟ ಹೆಚ್ಚಳವಾಗಿದೆ. ಇದು ಸಾಂಕ್ರಾಮಿಕ ರೋಗಗಳು ಹರಡಲು ಪ್ರಮುಖ ಕಾರಣವಾಗಿದೆ.
ನಗರದಲ್ಲಿ 31 ವಾರ್ಡುಗಳಿವೆ. ಈ ಪೈಕಿ ಸರ್ ಎಂ.ವಿ.ಬಡಾವಣೆ, ಪ್ರಶಾಂತನಗರ, ಮುನ್ಸಿಪಲ್ ಲೇಔಟ್, ವಾಪಸಂದ್ರ, ಭಾರತಿ ನಗರ, ಕಂದವಾರ ಸೇರಿ ವಿವಿಧ ಪ್ರದೇಶಗಳ ಪೈಕಿ ಹಲವೆಡೆ ಮನೆಗಳ ಸಮೀಪ ಇರುವ ಖಾಲಿ ನಿವೇಶನಗಳ ಮಾಲೀಕರು ಕಾಲಕಾಲಕ್ಕೆ ನಿವೇಶನ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿಲ್ಲ. ಇದರಿಂದ ಪಾರ್ಥೇನಿಯಂ, ಮುಳ್ಳಿನ ಗಿಡಗಳು ದಟ್ಟವಾಗಿ ಬೆಳೆದು, ಇಲಿ, ಹೆಗ್ಗಣ, ಹಾವು, ಕ್ರಿಮಿ ಕೀಟಗಳ ಆವಾಸ ಸ್ಥಾನವಾಗಿ ಪರಿವರ್ತನೆಯಾಗಿವೆ.

ಅನೈರ್ಮಲ್ಯ ವಾತಾವರಣ ಕಡೆಗಣನೆ
ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶ ಸೇರಿ ಹಲವೆಡೆ ಸ್ವಚ್ಛತೆ ಮರೀಚಿಕೆಯಾಗಿದೆ. ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ತ್ಯಾಜ್ಯದ ರಾಶಿ ಕಂಡು ಬರುತ್ತಿದೆ. ಮತ್ತೊಂದೆಡೆ ಚರಂಡಿಗಳು ಸ್ವಚ್ಛಗೊಳ್ಳದೆ ತ್ಯಾಜ್ಯದಿಂದ ತುಂಬಿರುತ್ತವೆ. ಮಳೆ ಬಂದಾಗ ತಗ್ಗು ಪ್ರದೇಶಗಳಿಗೆ ಕೊಳಚೆ ನೀರು ಹರಿಯುತ್ತಿದ್ದು ಅನೈರ್ಮಲ್ಯ ವಾತಾವರಣ ಸೃಷ್ಟಿಯಾಗಿರುವುದಕ್ಕೆ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಖಾಲಿ ನಿವೇಶನಗಳಲ್ಲಿನ ಅನೈರ್ಮಲ್ಯ ಮತ್ತು ಕ್ರಿಮಿಕೀಟಗಳ ಸಮಸ್ಯೆಯ ಬಗ್ಗೆ ಸ್ಥಳೀಯರು ಗಮನ ಸೆಳೆಯುತ್ತಲೇ ಇದ್ದಾರೆ. ಅಲ್ಲದೆ ನಿವೇಶನಗಳ ಸಮರ್ಪಕ ನಿರ್ವಹಣೆಗೆ ಸಂಬಂಧಪಟ್ಟ ಮಾಲೀಕರಿಗೆ ನೋಟಿಸ್ ನೀಡಲು ತೀರ್ಮಾನಿಸಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಇನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ಚುನಾವಣಾ ಗುಂಗಿನ ನಡುವೆ ಕಸದ ವಿಲೇವಾರಿಯನ್ನು ಕಡೆಗಣಿಸಿದ್ದು ಗ್ರಾಮೀಣ ಭಾಗದಲ್ಲಿ ಚರಂಡಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಹಲವು ವರ್ಷಗಳೇ ಕಳೆದಿವೆ.


ನಿರಂತರ ಸಭೆಗಳ ಚರ್ಚೆ
ಮುಂಗಾರು ಪೂರ್ವದಲ್ಲಿಯೇ ಜಿಲ್ಲಾಡಳಿತ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿ, ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಡಿವಾಣ, ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಲು ಸೂಚಿಸಿದೆ. ನೀರಿನ ಟ್ಯಾಂಕರ್‌ಗಳು, ನೀರು ಸಂಗ್ರಹಣಾ ತಾಣಗಳು, ಸಂಪುಗಳ ಸ್ವಚ್ಛತೆ, ಕಾಲರಾ, ಡೆಂಘೆ, ಮಲೇರಿಯಾ ಸೇರಿ ಇತರ ರೋಗಗಳ ಹರಡುವಿಕೆಗೆ ಕಡಿವಾಣ, ನೀರು ಪೂರೈಕೆಯ ಪೈಪ್‌ಲೈನ್‌ಗಳ ಸುಸ್ಥಿತಿ ಮತ್ತು ದುರಸ್ತಿ ಸೇರಿ ಇತರ ವಿಚಾರಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದೆ. ಆದರೆ, ಸ್ಥಳೀಯ ಆಡಳಿತ ಸಂಸ್ಥೆಗಳು ಎಲ್ಲವನ್ನೂ ಚರ್ಚೆಗೆ ಮಾತ್ರ ಸೀಮಿತಗೊಳಿಸಿದ್ದು, ಆಯಾ ವ್ಯಾಪ್ತಿಯಲ್ಲಿ ಅನೈರ್ಮಲ್ಯ ವಾತಾವರಣ ಕಂಡು ಬರುತ್ತಿದ್ದರೂ ಜಾಣಕುರುಡು ಪ್ರದರ್ಶಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.


ಕೊಳೆಗೇರಿ, ತಗ್ಗು ಪ್ರದೇಶದಲ್ಲಿ ಸಮಸ್ಯೆ
ಜಿಲ್ಲಾ ಕೇಂದ್ರದ 8 ಮತ್ತು 9ನೇ ವಾರ್ಡ್‌ಗಳಲ್ಲಿ ಪ್ರತಿ ಮಳೆಗಾಲದ ಸಂದರ್ಭದಲ್ಲಿ ಮನೆಗಳಿಗೆ ಮಳೆ, ಚರಂಡಿ ಮತ್ತು ಯುಜಿಡಿ ನೀರು ನುಗ್ಗುವುದರಿಂದ ಸ್ಥಳೀಯರು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ನಗರಸಭೆ ಕಚೇರಿ ಎದುರು ಪ್ರತಿಭಟಿಸಿ, ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದರಿಂದ ತಾತ್ಕಾಲಿಕವಾಗಿ ಪರಿಹಾರ ದೊರೆತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net