

ತುಮಕೂರು: ಭದ್ರತೆ ಬಗ್ಗೆ ಕಿಂಚಿತ್ತು ಗಮನಹರಿಸದೆ ಪ್ರಧಾನಿ ನರೇಂದ್ರ ಮೋದಿ ತುಮಕೂರಿನಲ್ಲಿ ರೋಡ್ ಶೋ ನಡೆಸಿದರು. ಮೋದಿ ಅವರ ಅನಿರೀಕ್ಷಿತ ಈ ನಡೆ ಎಸ್ಪಿಜಿ, ಪೊಲೀಸರನ್ನು ಕೆಲಕಾಲ ಗಾಬರಿಗೊಳಿಸಿತು.
ವಿವಿ ಹೆಲಿಪ್ಯಾಡ್‌ನಿಂದ ಹೊರಬಂದ ಬಿ.ಎಚ್.ರಸ್ತೆಗೆ ಪ್ರವೇಶ ಪಡೆಯುವ ವೇಳೆ ವಿವಿ ಮುಂಭಾಗದ ಸ್ಕೈವಾಕರ್ ಮೇಲೆ ನಿಂತಿದ್ದ ಜನ ನೋಡುತ್ತಿದ್ದಂತೆ ಪ್ರಧಾನಿ ಮೋದಿ ಕಾರಿನ ಬಾಗಿಲು ತೆರೆಯುವಂತೆ ಹೇಳಿ ಫುಟ್‌ಬೋರ್ಡ್ ಮೇಲೆ ನಿಂತು ಜನರತ್ತ ಕೈಬೀಸಿ ರೋಡ್‌ಶೋ ಆರಂಭಿಸಿಯೇ ಬಿಟ್ಟರು. ಈ ವೇಳೆ ಮೋದಿ, ಮೋದಿ ಜಯಘೋಷ ಮುಗಿಲುಮುಟ್ಟಿತ್ತು.
ರೋಡ್ ಶೋ ಪೂರ್ವನಿಗದಿತ ಕಾರ್ಯಕ್ರಮ ಇರಲಿಲ್ಲ. ಕಾರಿನಲ್ಲಿ ಚಲಿಸುವ ಮೋದಿ ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲುಗಳಲ್ಲಿ ನಿಂತಿದ್ದ ಜನಸ್ತೋಮ ಕಂಡ ಮೋದಿ ಭದ್ರತೆ ಬಗ್ಗೆ ಕಿಂಚಿತ್ತು ಗಮನಕೊಡದೆ ರೋಡ್ ಶೋ ನಡೆಸಿ, ಜನರತ್ತ ಕೈಬೀಸಿ ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಹೂವಿನ ಮಳೆಗರೆಯಲಾಯಿತು. ಸಮಾವೇಶ ಆಯೋಜಿಸಿದ್ದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದವರೆಗೆ ಮುಕ್ಕಾಲು ಕಿ.ಮೀ., ದೂರ ಕಾರಿನ ಫುಟ್‌ಬೋರ್ಡ್‌ನಲ್ಲಿ ನಿಂತು ಮೋದಿ ತಮ್ಮ ಎಂದಿನ ಶೈಲಿನಲ್ಲಿ ಕೈಬೀಸುತ್ತ, ನಗೆಬೀರಿದರು.