ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ

789
Published on

ರಾಮನಗರ: ರಾಮನಗರದ ಜಾನಪದ ಲೋಕ ನಿರ್ಮಾಣದ ಕರ್ನಾಟಕ ಜಾನಪದ ಪರಿಷತ್‌ಗೆ ಯುನೆಸ್ಕೋ ಮಾನ್ಯತೆ ದೊರೆತಿದೆ.

ನಾಡೋಜ ಎಚ್.ಎಲ್. ನಾಗೇಗೌಡರಿಂದ ಜಾನಪದವನ್ನೇ ಮೂಲವಾಗಿಸಿಟ್ಟು ಉತ್ತಮ ಪರಿಸರದಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ಕುಂಭಾಪುರ ಬಳಿಯ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ ಸ್ಥಾಪಿತವಾದ ಜಾನಪದ ಲೋಕ ಇಂದು ರಾಜ್ಯ, ದೇಶದಲ್ಲಿ ಬಹುದೊಡ್ಡಮಟ್ಟದ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದು ನಿಂತಿದೆ. ಜಾನಪದ ಲೋಕ ಕನ್ನಡ ನಾಡಿನಲ್ಲಷ್ಟೇ ಅಲ್ಲ, ಭಾರತದಲ್ಲಿಯೇ ಅತ್ಯಂತ ಅಪರೂಪದ ವೈಶಿಷ್ಟ್ಯಗಳಿಂದ ಕೂಡಿದ ಬೃಹತ್ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಂತಹ ಸುಂದರ ಸಾಂಸ್ಕೃತಿಕ ಕೇಂದ್ರದ ರೂವಾರಿ ಕರ್ನಾಟಕ ಜಾನಪದ ಪರಿಷತ್ತಿಗೆ 2024ರ ಜೂನ್‌ನಲ್ಲಿ ಯುನೆಸ್ಕೋ ಮುಖ್ಯಾಲಯದಲ್ಲಿ ನಡೆದ ಹತ್ತನೇ ಅಧಿವೇಶನದ ಸಮಯದಲ್ಲಿ ಯುನೆಸ್ಕೋದಿಂದ ಕರ್ನಾಟಕ ಜಾನಪದ ಪರಿಷತ್ತಿಗೆ ಮಾನ್ಯತೆ ಘೋಷಿಸಲಾಗಿದೆ. ವಿಶ್ವದ ವಿವಿಧ ದೇಶಗಳ 58 ಸಾರ್ವಜನಿಕ ಸೇವಾ ಸಂಸ್ಥೆಗಳ ಪೈಕಿ ಕರ್ನಾಟಕ ಜಾನಪದ ಪರಿಷತ್ತು ಒಂದು ಎಂದು ಗುರುತಿಸಿದೆ. ಕರ್ನಾಟಕ ಜಾನಪದ ಪರಿಷತ್ತು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಆಂತರಿಕ ಸಮಿತಿಗೆ ಸಲಹೆ ನೀಡಲು ಸಂಸ್ಥೆ ಮಾನ್ಯತೆ ಪಡೆದುಕೊಂಡಿದೆ.

ಮಾನ್ಯತೆಯಿಂದ ಆಗುವ ಲಾಭ:

ದೇಶ, ವಿದೇಶದ ಪ್ರವಾಸಿಗರನ್ನು ಜಾನಪದ ಲೋಕ ಆಕರ್ಷಿಸಲು ಉತ್ತಮ ಅವಕಾಶ ಒದಗಿಸುವ ಜತೆಗೆ ವಿದೇಶಿಗರಿಗೂ ಜಾನಪದ ಸಂಸ್ಕೃತಿ ಅರಿಯಲು ಸಹಕಾರಿಯಾಗಲಿದೆ. ಅಂತಾರಾಷ್ಟ್ರೀಯಮಟ್ಟದಲ್ಲಿ ಉತ್ತಮ ಹೆಸರು ಜತೆಗೆ ವಿಶ್ವಮಟ್ಟದಲ್ಲಿ ಜಾನಪದ ಲೋಕ ಗುರುರತಿಸಲ್ಪಡುತ್ತದೆ. ಜಾಗತಿಕ ಸಂವಾದಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಯುನೆಸ್ಕೋ ಮಾನ್ಯತೆ ಉತ್ತೇಜಿಸುತ್ತದೆ. ಜತೆಗೆ ಕರ್ನಾಟಕ ಜಾನಪದ ಪರಿಷತ್ತು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ಮಾನ್ಯತೆಯಿಂದ ತನ್ನ ಪಾತ್ರವನ್ನು ಹೆಚ್ಚಿಸಿಕೊಂಡಿದೆ.

ಸಂಸ್ಕೃತಿ ಕಣಜ

ಹೆಸರೇ ಹೇಳುವಂತೆ ಜಾನಪದದ ಸೊಗಡು ಜಾನಪದ ಲೋಕದಲ್ಲಿ ತುಂಬಿದೆ. ಹಿಂದಿನ ಕಾಲದಲ್ಲಿ ಜನರು ಬಳಸುತ್ತಿದ್ದ ವಸ್ತುಗಳು, ಜನಪದ ಕಲಾ ಪ್ರಕಾರಗಳ ಚಿತ್ರಗಳು, ರಾಜ ಮಹಾರಾಜರು ಬಳಸುತ್ತಿದ್ದ ಆಯುಧಗಳು ವಸ್ತು ಸಂಗ್ರಹಾಲಯಗಳು, ಹೊಸದಾಗಿ ಸ್ಥಾಪಿತವಾದ ಗಿರಿಜನರ ಹಾಡಿ ಅವರ ಬದುಕಿನ ಚಿತ್ರಣದ ಮಾಹಿತಿ, ಉತ್ತಮ ಕಲಾಕೃತಿಗಳು, ಜನಪದ ಕಲೆಗಾರರ ವೇಷ ಭೂಷಣ, ಸಂಸ್ಕೃತಿಯ ಅನಾವರಣ, ಪುಸ್ತಕಗಳು, ಗೀತ ಸಾಹಿತ್ಯ ಸುಂದರ ಪರಿಸರ ಹೀಗೆ ಹತ್ತು ಹಲವು ವೈಶಿಷ್ಟ್ಯಗಳು ಜಾನಪದ ಲೋಕದಲ್ಲಿದ್ದು ಸಾಂಸ್ಕೃತಿಕ ಕೇಂದ್ರವಾಗಿ ಜನಪದದ ಸಂಸ್ಕೃತಿ ಕಣಜವಾಗಿದೆ.

"ಯುನೆಸ್ಕೋದಿಂದ ನೀಡಿರುವ ಈ ಮಾನ್ಯತೆಯನ್ನು ಗೌರವದಿಂದ ಸ್ವೀಕರಿಸಲಾಗುವುದು. ಇದು ನಾಡೋಜ ಎಚ್. ಎಲ್. ನಾಗೇಗೌಡರ ಜಾನಪದ ಕಳಕಳಿಗೆ ಗೌರವ ತಂದುಕೊಟ್ಟಿದೆ. ಕರ್ನಾಟಕದ ಜಾನಪದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಸಂವರ್ಧನೆ ಮತ್ತು ಪ್ರಸಾರ, ಪ್ರಚಾರ, ದಾಖಲಾತಿಗಳ ಈ ನಮ್ಮ ಕಾರ್ಯದ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ."

ಪ್ರೊ.ಹಿ.ಚಿ. ಬೋರಲಿಂಗಯ್ಯ, ಅಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net