ನದಿಯಲ್ಲಿ ಸಂಗ್ರಹವಾಗದ ಮರಳು ರಾಶಿ : ಉದ್ಭವಲಿಂಗ ಸ್ಪಷ್ಟ ಗೋಚರ : ಮರಳುಗಾರಿಕೆಗೆ ಹಿನ್ನಡೆ ಸಂಭವ

New Project (20)
Published on

ಉಪ್ಪಿನಂಗಡಿ: ಸಾಮಾನ್ಯವಾಗಿ ಒಂದು ಮಳೆಗಾಲ ಮುಗಿದ ಬಳಿಕ ನದಿಯ ಒಡಲಿನಲ್ಲಿ ಭಾರಿ ಪ್ರಮಾಣದಲ್ಲಿ ಮರಳ ರಾಶಿ ಸಂಗ್ರಹವಾಗುತ್ತದೆ. ನದಿ ಗರ್ಭದಲ್ಲಿರುವ ಉದ್ಭವ ಲಿಂಗದ ಮೇಲೆ ಮರಳ ರಾಶಿ ಸಂಗ್ರಹಣೆಗೊಂಡು ಉದ್ಭವಲಿಂಗದ ನೆಲೆ ಎಲ್ಲಿ ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಆದರೆ ಈ ಬಾರಿಯ ಮಳೆಗಾಲದಲ್ಲಿ ಸುದೀರ್ಘ ಕಾಲ ನದಿಯಲ್ಲಿ ಪ್ರವಾಹವಿದ್ದರೂ ಮರಳ ರಾಶಿ ಹರಿದು ಬರದೆ ಉದ್ಬವಲಿಂಗದ ಭಾಗ ನಿಖರವಾಗಿ ಕಾಣುತ್ತಿದೆ. ನದಿಯಲ್ಲಿ ಅಲ್ಲಲ್ಲಿ ಅಣೆಕಟ್ಟುಗಳು ನಿರ್ಮಾಣವಾಗಿರುವುದು ಕೂಡಾ ಮರಳು ನೆರೆ ನೀರಿನಲ್ಲಿ ಹರಿದು ಬರುವುದನ್ನು ತಡೆಯುತ್ತಿರಬಹುದೆಂಬುದು ಸ್ಥಳೀಯರ ಅನಿಸಿಕೆ.

ಕಳೆದ ವರ್ಷ ಬಿಳಿಯೂರು ಅಣೆಕಟ್ಟಿನ ಹಿನ್ನೀರಿನಿಂದಾಗಿ ಉಪ್ಪಿನಂಗಡಿ ಗ್ರಾಮದಂಚಿನವರೆಗೆ ನದಿಯಲ್ಲಿ ಹಿನ್ನೀರು ತುಂಬಿ ಮರಳುಗಾರಿಕೆಗೆ ಹಿನ್ನಡೆಯುಂಟಾಗಿತ್ತು. ಮಳೆಗಾಲ ಪ್ರಾರಂಭವಾದ ಕಾರಣಕ್ಕೆ ನದಿ ತುಂಬಾ ನೀರಿದ್ದ ಹಿನ್ನೆಲೆಯಲ್ಲಿ ಮರಳುಗಾರಿಕೆ ಅಸಾಧ್ಯವಾಗಿತ್ತು. ಈ ವಿದ್ಯಮಾನದಿಂದಾಗಿ ನದಿಯ ಒಡಲಿನಲ್ಲಿ ಮರಳು ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ನದಿಯ ಒಡಲಿನಲ್ಲಿ ಹೊಸ ಮರಳಿಲ್ಲದೆ ಯಥಾಸ್ಥಿತಿ ಮುಂದುವರೆದಿರುವುದು ಕಂಡು ಬರುತ್ತಿದೆ.

ಜೂನ್ ತಿಂಗಳಾರಂಭದಿಂದ ಪ್ರಾರಂಭಗೊಂಡ ಮಳೆ ನವೆಂಬರ್‌ವರೆಗೂ ಮುಂದುವರಿದು ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡರ ಒಡಲು ನೀರು ತುಂಬಿಕೊಂಡಿತ್ತು. ಕಳೆದೊಂದು ವಾರದಿಂದ ಮಳೆ ದೂರವಾಗಿ ನದಿಯಲ್ಲಿ ಮರಳು ಕಾಣಿಸಲಾರಂಭಿಸಿದೆ. ಆದರೆ ಮರಳು ರಾಶಿ ಬೀಳದೆ ಮರಳುಗಾರಿಕೆಗೆ ಹಿನ್ನಡೆಯಾಗಲಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net