ತೆರವುಗೊಳ್ಳದ ರಾಜ್ಯ ಹೆದ್ದಾರಿ ಮಣ್ಣು

New Project (48)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಗುರುವಾಯನಕೆರೆ- ಕಾರ್ಕಳ ರಾಜ್ಯ ಹೆದ್ದಾರಿ ಕಾಪಿನಡ್ಕ ಎಂಬಲ್ಲಿ ರಸ್ತೆ ಬದಿ ಗುಡ್ಡ ಕುಸಿತ ಉಂಟಾಗಿ ವರ್ಷ ಕಳೆದರೂ ಮಣ್ಣು ತೆರವುಗೊಂಡಿಲ್ಲ..!

ಪ್ರತಿದಿನ ಸಾವಿರಾರು ವಾಹನಗಳ ಓಡಾಟ ಇರುವ ಈ ರಾಜ್ಯ ಹೆದ್ದಾರಿ ಕಳೆದ ವರ್ಷ ಅಭಿವೃದ್ಧಿ ಹೊಂದಿದೆ. ಕಳೆದ ಮಳೆಗಾಲದಲ್ಲಿ ಇಲ್ಲಿ ರಸ್ತೆ ಬದಿಯ ಗುಡ್ಡ ಕುಸಿತ ಉಂಟಾಗಿ ಮಣ್ಣಿನ ರಾಶಿ ರಸ್ತೆವರೆಗೂ ವ್ಯಾಪಿಸಿದೆ. ಒಂದು ಮಳೆಗಾಲ ಕಳೆದು ಇನ್ನೊಂದು ಮಳೆಗಾಲ ಕಾಲಿಟ್ಟರೂ ಸಂಬಂಧಪಟ್ಟ ಇಲಾಖೆ ಇಲ್ಲಿನ ಮಣ್ಣು ತೆರವಿಗೆ ಮುಂದಾಗಿಲ್ಲ. ಈ ಮಳೆಗಾಲದಲ್ಲಿ ಗುಡ್ಡ ಇನ್ನಷ್ಟು ಕುಸಿದರೆ ಮಣ್ಣು ರಸ್ತೆಯನ್ನು ವ್ಯಾಪಿಸುವ ಜತೆಗೆ ಸಂಪರ್ಕ ಕಡಿತ ಉಂಟಾಗುವ ಸಾಧ್ಯತೆ ಇದೆ.

ಮಣ್ಣು ಕುಸಿತಗೊಂಡಿರುವ ಸ್ಥಳದ ಇನ್ನೊಂದು ಭಾಗದಲ್ಲಿ ಕಡಿದು ಹಾಕಿರುವ ಮರದ ರೆಂಬೆಗಳ ರಾಶಿಯೂ ಇದೆ. ಇದನ್ನು ರಸ್ತೆ ಬದಿ ತಂದು ಹಾಕಿ ಹಲವು ತಿಂಗಳು ಕಳೆದರೂ ತೆರವುಗೊಳಿಸಲಾಗಿಲ್ಲ. ಈ ಕಾರಣದಿಂದ ಇಲ್ಲಿ ರಸ್ತೆ ವ್ಯಾಪ್ತಿಯ ಅಗಲ ತೀರಾ ಕಿರಿದಾಗಿದೆ. ಉಳಿದಂತೆ ಉತ್ತಮವಾಗಿರುವ ಈ ರಸ್ತೆಯಲ್ಲಿ ಕಾಪಿನಡ್ಕ ಪ್ರದೇಶದಲ್ಲಿ ಗುಡ್ಡ ಜರಿತದಿಂದ ರಸ್ತೆಗೆ ವ್ಯಾಪಿಸಿರುವ ಮಣ್ಣು ಹಾಗೂ ಪೊದೆಗಳ ರಾಶಿ ಅಪಾಯಕಾರಿಯಾಗಿದ್ದು, ವೇಗವಾಗಿ ಬರುವ ವಾಹನಗಳು ಏಕಾಏಕಿ ನುಗ್ಗುವ ವೇಳೆ ಅಪಘಾತ ಉಂಟಾಗುವ ಸಾಧ್ಯತೆ ಇದೆ ಎಂದು ವಾಹನ ಚಾಲಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net