ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಸಂಶೋಧನೆಗೆ ಅಗತ್ಯ ಪ್ರೋತ್ಸಾಹ: ಸಚಿವ ದಿನೇಶ್ ಗುಂಡೂರಾವ್

Sudhee_08_New_Hostel_Building_Inaug_@_Aayush_Hospital_Campus_Kamakshi_Palya (4)
Published on

ಬೆಂಗಳೂರು: ಯುನಾನಿ ಮತ್ತು ಹೋಮಿಯೋಪಥಿಯಂತಹ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಆಯುಷ್ ಇಲಾಖೆ ಅಗತ್ಯ ಪ್ರೋತ್ಸಾಹ ನೀಡಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ನಗರದ ಕೆ.ಎಚ್.ಬಿ. ಕಾಲನಿಯಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಯುನಾನಿ ಮತ್ತು ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯಗಳ ಪುರುಷ ವಿದ್ಯಾರ್ಥಿನಿಲಯವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಆಯುಷ್ ವೈದ್ಯ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲ್ಪಿಸಿರುವ ವಿದ್ಯಾರ್ಥಿನಿಲಯ ಮತ್ತು ಶಿಕ್ಷಣ ಸಂಸ್ಥೆಗಳ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವೈದ್ಯರಾಗಿ ಹೊರಬನ್ನಿ. ಆ ಮೂಲಕ ಸಮಾಜಕ್ಕೆ ಉತ್ತಮ ಸೇವೆಯೊಂದಿಗೆ ನಿಮ್ಮದೇ ಆದ ಕೊಡುಗೆ ನೀಡಿ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಅಡುಗೆ ಮನೆ ಮತ್ತು ಊಟದ ಹಾಲ್ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದ ಸಚಿವರು, ಜೀವನ ಶೈಲಿ ಹಾಗೂ ಹನ್ಯಾಸಗಳು ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡಲಿದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ವೈದ್ಯ ವಿದ್ಯಾರ್ಥಿಗಳು ಸೇರಿ ಯುವಜನರು ಉತ್ತಮ ಜೀವನ ಶೈಲಿ ಹಾಗೂ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಪ್ರಿಯಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಈ ಕಟ್ಟಡದಲ್ಲಿನ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಉತ್ತಮ ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಈ ಭಾಗದಲ್ಲಿ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಸ್ಕೈವಾಕ್ ನಿರ್ಮಿಸುವಂತೆ ಕೋರಿಕೆ ಬಂದಿದ್ದು, ಕಾನೂನಿನ ಸಮಸ್ಯೆಯಿಂದಾಗಿ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸ್ಕೈವಾಕ್ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆ ಆಯುಕ್ತ ವಿಪಿನ್ ಸಿಂಗ್, ಜಂಟಿ ನಿರ್ದೇಶಕಿ ಡಾ. ಎಸ್. ಮಂಜುಳ, ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪ್ರಾಚಾರ್ಯರು ಡಾ. ಕೆ. ರಾಜೇಶ್ವರಿ, ಬೋಧಕ ವಿಭಾಗದ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

188 ವಿದ್ಯಾರ್ಥಿಗಳಿಗೆ ಅನುಕೂಲ

ಯುನಾನಿ ಮತ್ತು ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯಗಳ ಪುರುಷ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೆಲ ಮಹಡಿ ಸೇರಿ 2 ಅಂತಸ್ತಿನ ಈ ಕಟ್ಟಡವನ್ನು 12.50 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗಿದೆ. 188 ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆಯಬಹುದಾಗಿದ್ದು, 64 ಕೊಠಡಿಗಳು ಸೇರಿ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net