

ಬೆಂಗಳೂರು: ಆಟೋ ಚಾಲಕರೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ. ಮೋಹನ್ ಕುಮಾರ್ (38) ಎಂಬುವವರೇ ತಿಗಣೆ ಔಷಧ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೋಹನ್ಗೆ ಪತ್ನಿ ಇಬ್ಬರು ಮಕ್ಕಳಿದ್ದಾರೆ. ಮೋಹನ್ ಐದಾರು ವರ್ಷಗಳಿಂದ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಟೋ ವ್ಯವಹಾರ ಕೈಹಿಡಿಯುತ್ತಿಲ್ಲವೆಂದು ಮೋಹನ್ ಚಿಂತೆಗೆ ಒಳಗಾಗಿದ್ದರು.
ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಸೇವೆ ಆರಂಭಿಸಿದ ಪರಿಣಾಮ ಪ್ರಯಾಣಿಕರು ಇಲ್ಲದೇ ಉಳಿದ ಆಟೋ ಚಾಲಕರಂತೆ ಇವರೂ ಆರ್ಥಿಕ ಸಮಸ್ಯೆಗೆ ಸಿಲುಕಿದ್ದರೆಂದು ಆಸ್ಪತ್ರೆಗೆ ಬಂದಿದ್ದ ಇತರ ಆಟೋ ಚಾಲಕರು ತಿಳಿಸಿದರು.
ಇಂಥ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಜೂನ್ 15ರೊಳಗೆ ಸ್ಕೂಲ್ ಫೀಸ್ ಕಟ್ಟಲೇಬೇಕೆಂದು ಶಾಲೆಯವರು ಡೆಡ್ಲೈನ್ ಕೊಟ್ಟಿದ್ದರಿಂದ ಮೋಹನ್ ಅಸಹಾಯಕರಾಗಿದ್ದರು. ನಿರ್ಜನ ಪ್ರದೇಶವನ್ನು ಹುಡುಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಅಕ್ಕಪಕ್ಕದಲ್ಲಿ ಹೋಗುತ್ತಿದ್ದ ಜನರು ಇದನ್ನು ತಿಳಿದು, ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ. ಮನೆಯವರು ಕೂಡಲೇ ಪರಿಚಿತರ ನೆರವಿನೊಂದಿಗೆ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.