

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಗ್ರಾಮದ ಐತಿಹಾಸಿಕ ಶ್ರೀ ಉಳುಮೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮಗಳಿಂದ ನೆರವೇರಿತು.
ಬೆಳಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ನಡೆಸಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಯಿತು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಕೃಷ್ಣಗಂಧೋತ್ಸವ ನಡೆಸಲಾಯಿತು.
ಉತ್ಸವದಲ್ಲಿ ಬಂದ ದೇವರ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಸಿ ಪೂಜೆ ಸಲ್ಲಿಸಿದ ಬಳಿಕ ನೆರೆದಿದ್ದ ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ರಥ ಬೀದಿಯಲ್ಲಿ ತೇರನ್ನು ಎಳೆದರು.
ಭಕ್ತರು ರಥದ ಮೇಲೆ ಹಣ್ಣು, ದವನ ತೂರಿ ಸಂಭ್ರಮಿಸಿದರು. ಭಕ್ತರು ದೇವರಿಗೆ ಹಣ್ಣುಕಾಯಿ ನೀಡಿ ಭಕ್ತಿ ಸಮರ್ಪಿಸಿದರು. ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನತೆ ರಥೋತ್ಸವವನ್ನು ಕಣ್ತುಂಬಿಕೊಂಡರು.
ಉಳುಮೇಶ್ವರ ಯುವಕ ಸಂಘದ ಸದಸ್ಯರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಿದ್ದರು. ರಥೋತ್ಸವದ ಪ್ರಯುಕ್ತ ಸೇರಿದ್ದ ಜಾತ್ರೆಯಲ್ಲಿ ಸಿಹಿ ತಿನಿಸು, ಮಂಡಕ್ಕಿ, ತಂಪು ಪಾನೀಯ, ಅಲಂಕಾರಿಕ ವಸ್ತುಗಳ ವ್ಯಾಪಾರ ಬಿರುಸಿನಿಂದ ನಡೆಯಿತು.