

ತುಮಕೂರು: ಮಹಾನಗರ ಪಾಲಿಕೆಯ 30ನೇ ವಾರ್ಡ್ನ ವಿಜಯನಗರ ಬಡಾವಣೆಯ 20ಕ್ಕು ಹೆಚ್ಚು ಮನೆಗಳ ನೀರಿನ ಸಂಪ್ಗಳಿಗೆ ಯುಜಿಡಿ ನೀರು ಹರಿದುಬಂದು ಅವಾಂತರ ಸೃಷ್ಟಿಯಾಗಿದೆ. ಕಳೆದ 2 ದಿನಗಳಿಂದ ಸಂಪ್ಗಳಿಗೆ ಒಳಚರಂಡಿ ನೀರು ಸೇರಿರುವುದು ಆತಂಕಕ್ಕೆ ಕಾರಣವಾಗಿದೆ.
ವಿಜಯನಗರ 2ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆಯ 20ಕ್ಕು ಹೆಚ್ಚು ಮನೆಗಳ ಸಂಪ್ಗಳಿಗೆ ಭಾನುವಾರ ಯುಜಿಡಿ ನೀರು ಹರಿದಿದ್ದು ಜನರಲ್ಲಿ ಭೀತಿ ಹುಟ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್ ಗಮನಕ್ಕೆ ಸ್ಥಳಿಯರು ತಂದಿದ್ದರು. ತಕ್ಷಣವೇ ಪಾಲಿಕೆ ಸಿಬ್ಬಂದಿ ಗಮನಸೆಳೆದು ತಾತ್ಕಾಲಿಕವಾಗಿ ಪರಿಹಾರ ಒದಗಿಸಿದ್ದರು. ಆದರೆ, ಸೋಮವಾರವು ಯುಜಿಡಿ ನೀರು ಸಂಪ್ಗಳಿಗೆ ಹರಿದಿದ್ದು ನಗರ ಶಾಸಕರ ಗಮನಕ್ಕೆ ತರಲಾಯಿತು.
ಶಾಸಕರ ದೌಡು: ಮನೆಗಳ ಸಂಪ್ಗಳಿಗೆ ಯುಜಿಡಿ ನೀರು ಹರಿದಿರುವ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಬೆಳಗ್ಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಪಾಲಿಕೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತತ್ಕ್ಷಣವೇ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನಿಡಿದರು.
ಮಳೆ ನೀರು ಚರಂಡಿಯಿಂದ ಸಂಪ್ಗೆ ನೀರು ಹರಿದುಬರುತ್ತಿರುವುದೇ ಎಂದೂ ಅಧಿಕಾರಿಗಳು ಪರಿಶೀಲಿಸಿದರು. ಈ ಸಮಸ್ಯೆಗೆ ಕಾರಣವೇನು ಈ ಭಾಗದಲ್ಲಿ ಒಳಚರಂಡಿ ಪೈಪ್ಲೈನ್ ಮಾರ್ಗ ಒಡೆದುಹೋಗಿ ಕೊಳಚೆ ನೀರು ಸೋರಿಕೆಯಾಗಿ ಸಂಪ್ಗಳಿಗೆ ಹರಿದು ಬಂದಿದೆಯೆ ಎಂದು ಪತ್ತೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ಪಾಲಿಕೆ ಇಇ ಸಂದೀಪ್ ಮತ್ತಿತರರು ಹಾಜರಿದ್ದರು.
ಡೆಂ ಭೀತಿ, ಜನರಲ್ಲಿ ಆತಂಕ !
ಯುಜಿಡಿ ಮಾರ್ಗ ಸುಸ್ಥಿತಿಯಲ್ಲಿದ್ದೂ ಕೊಳಚೆ ನೀರು ಸಂಪ್ಗಳಿಗೆ ಹೇಗೆ ಬರುತ್ತಿದೆ ಎಂಬುದನ್ನು ಪತ್ತೆಹಚ್ಚಲು ಪಾಲಿಕೆ ಸಿಬ್ಬಂದಿ, ಕರ್ನಾಟಕ ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ ಸಿಬ್ಬಂದಿ ಹರಸಾಹಸ ಪಟ್ಟಿದ್ದು ಸಂಜೆಯಾದರೂ ಸಮಸ್ಯೆ ಮೂಲ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಸಂಪ್ಗೆ ನೀರು ಪೂರೈಕೆ ಸ್ಥಗಿತಗೊಳಿಸಿದ್ದು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿ ಹಿನ್ನೆಲೆಯಲ್ಲಿ ಶುದ್ಧ ನೀರು ಪೂರೈಕೆಗೆ ಪಾಲಿಕೆ ಸಿಬ್ಬಂದಿ ಕ್ರಮವಹಿಸಬೇಕಿದೆ.