

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2021ನೇ ಸಾಲಿನ ವೈದ್ಯಕೀಯ, ದಂತವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕಾಗಿ ವೇಳಾಪಟ್ಟಿ ಮತ್ತು ಶುಲ್ಕದ ಮಾಹಿತಿಯನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಆದ್ಯತಾ ಕ್ರಮದಲ್ಲಿ ಇಚ್ಛೆಯನ್ನು ದಾಖಲಿಸಬಹುದಾಗಿದೆ. ನೈಜ ಸೀಟು ಹಂಚಿಕೆಯ ಫಲಿತಾಂಶವನ್ನು ಫೆ.2ರಂದು ಪ್ರಕಟಿಸಲಿದೆ.
ಶುಲ್ಕದ ವಿವರ: ಖಾಸಗಿ ಹಾಗೂ ಡೀಮ್ಡ್ ವಿವಿಗಳಲ್ಲಿ ಪದವಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಶುಲ್ಕದ ವಿವರಗಳನ್ನು ಕೆಇಎ ಪ್ರಕಟಿಸಿದೆ. ಈ ಹಿಂದೆ ಖಾಸಗಿ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಮತ್ತು ಸರ್ಕಾರದ ನಡುವೆ ನಡೆದ ಸಭೆಯ ಪ್ರಕಾರ ವೈದ್ಯ ಹಾಗೂ ದಂತ ವೈದ್ಯಕೀಯ ಪದವಿ ಕೋರ್ಸ್ ಪ್ರವೇಶಕ್ಕೆ ಸರ್ಕಾರಿ ಕೋಟಾದ ಸೀಟುಗಳ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ. ಇನ್ನುಳಿದ ಕೋಟಾದ ಸೀಟುಗಳಿಗೆ ಶುಲ್ಕ ನಿಗದಿ ಮಾಡಲಾಗಿದೆ.
ಮಂಡ್ಯ ನಾಗಮಂಗಲದ ಎಐಎಂಎಸ್, ಎಸ್‌ಡಿಎಂ ಧಾರವಾಡ, ಕೆಬಿಎನ್ ಕಲಬುರಗಿ, ಸಿಡಿಎಸ್‌ಎನ್‌ಆರ್‌ಐ ಬೆಂಗಳೂರು ಕಾಲೇಜುಗಳಲ್ಲೂ ಸರ್ಕಾರಿ ಕೋಟಾದ ಸೀಟುಗಳಿಗೆ 1,28,746 ರೂ. ಶುಲ್ಕವನ್ನೇ ಮುಂದುವರಿಸಲಾಗಿದೆ. ಇದಲ್ಲದೆ, ಖಾಸಗಿ ಕೋಟಾದ ಸೀಟುಗಳಿಗೆ 18- 20 ಲಕ್ಷ ರೂ., ಎನ್‌ಆರ್‌ಐ ಕೋಟಾ ಸೀಟುಗಳಿಗೆ 32 ಲಕ್ಷ ರೂ. ಗಳಿಂದ 34 ಲಕ್ಷ ರೂ. ಪಾವತಿಸಬೇಕು. ಸಂಪೂರ್ಣ ಶುಲ್ಕದ ಮಾಹಿತಿಗಾಗಿ http://kea.kar.nic.in
ನೋಡಬಹುದು.