

ಉಡುಪಿ: ಸಮಾಜದಲ್ಲಿ ಜಾತಿ ನಿಂದನೆ, ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು ಅವುಗಳ ತಡೆ ಹಾಗೂ ತ್ವರಿತ ನ್ಯಾಯದ ಕುರಿತು ಎಲ್ಲರಿಗೂ ಮಾಹಿತಿ ಅಗತ್ಯ. ಕಾನೂನುಗಳು ಇದ್ದರಷ್ಟೇ ಸಾಲದು. ಸಮಾಜದ ಮನಸ್ಥಿತಿಯೂ ಬದಲಾಗಬೇಕು. ದೌರ್ಜನ್ಯಕ್ಕೆ ಒಳಗಾದವರು ತಮ್ಮ ಹಕ್ಕು ಹಾಗೂ ಕಾನೂನಿನ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ವಕೀಲೆ ಸುಚಿತ್ರಾ ಕರೆ ನೀಡಿದರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎವಿ ಹಾಲ್ನಲ್ಲಿ ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಹಾಗೂ ರಾಷ್ಟ್ರೀಯ ಸೇವಾ ಯೋಜನೆ, ಮಾದಕ ವ್ಯಸನ ವಿರೋಧಿ ಸಮಿತಿ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ಮಾದಕ ವ್ಯಸನ ಮುಕ್ತ ಸಮಾಜ, ದೌರ್ಜನ್ಯ ತಡೆ, ಅಸ್ಪೃಶ್ಯತೆ ನಿವಾರಣೆ ಕುರಿತು ಗುರುವಾರ (ಸೆ.24) ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವ್ಯಸನಕ್ಕೆ ಬಲಿಯಾಗಬೇಡಿ
ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಭರತೇಶ್ ಮಾತನಾಡಿ, ದೇಶದ ಅಭಿವೃದ್ಧಿಗೆ ನಾವು ನೀಡಬಹುದಾದ ಮಹತ್ವದ ಕೊಡುಗೆಯೆಂದರೆ ಮಾದಕ ದ್ರವ್ಯಗಳಿಂದ ದೂರವಿರುವುದು. ಆ ವ್ಯಸನದಿಂದ ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮ ಆಗುತ್ತದೆ. ಕುಟುಂಬ ಹಾಗೂ ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದರು.
ಕಾಲೇಜ್ನ ಪ್ರಾಂಶುಪಾಲೆ ಪ್ರೊ. ನಿಕೇತನಾ ಅಧ್ಯಕ್ಷತೆ ವಹಿಸಿದ್ದರು.
ರಮೇಶ್, ವಿಜಯಲಕ್ಷ್ಮೀ, ಉಮಾಕಾಂತಿ, ಮಾದಕ ವ್ಯಸನ ವಿರೋಧಿ ಸಮಿತಿಯ ಸಂಚಾಲಕ ಡಾ. ರವೀಶ ಬಿ., ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ರಾಕೇಶ್ ಹಾಗೂ ಡಾ. ಸಫಿಯಾ ಉಪಸ್ಥಿತರಿದ್ದರು.
ಲಲಿತಾ ಭಟ್ ಸ್ವಾಗತಿಸಿದರು. ಉಡುಪಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ವಿನಾಯಕ್ ವಂದಿಸಿದರು. ವಿದ್ಯಾರ್ಥಿನಿ ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಎನ್ಎಸ್ಎಸ್ ದಿನಾಚರಣೆ ಆಚರಿಸಿ, ಪ್ರಸಕ್ತ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಮಾದಕ ವ್ಯಸನಮುಕ್ತ ಸಮಾಜದ ಸಂದೇಶ ಸಾರಲು ವಿದ್ಯಾರ್ಥಿನಿಯರು ಕಾಲೇಜ್ನಿಂದ ಭುಜಂಗ ಪಾರ್ಕ್ವರೆಗೆ ಜಾಥಾ ನಡೆಸಿದರು.
ಹೊಸ ಅನುಭವ ಪಡೆಯುವ ಕುತೂಹಲ, ಅಪಾಯವನ್ನು ಸ್ವೀಕರಿಸುವ ಪ್ರವೃತ್ತಿ ಹಾಗೂ ಗೆಳೆಯರ ಒತ್ತಡವೂ ಮಾದಕ ವಸ್ತುಗಳನ್ನು ಸೇವಿಸಲು ಕಾರಣವಾಗಬಹುದು. ಯುವಜನರು ಆರೋಗ್ಯಕರ ಜೀವನಶೈಲಿ ಹಾಗೂ ಸಕಾರಾತ್ಮಕ ಚಟುವಟಿಕೆ ರೂಢಿಸಿಕೊಳ್ಳಬೇಕು.
ಕ್ಯಾಥರಿನ್. ಆರೋಗ್ಯ ಇಲಾಖೆಯ ಮನ:ಶಾಸ್ತ್ರ ತಜ್ಞೆ.