

ಉಡುಪಿ: ಇಂದಿನ ಹೊಸ ತಲೆಮಾರಿನ ಯುವಕ&-ಯುವತಿಯರಿಗೆ ಬದುಕಿನಲ್ಲಿ ನೆಮ್ಮದಿ ಹಾಗೂ ಸಾರ್ಥಕತೆ ಕಂಡುಕೊಳ್ಳುವ ರೀತಿ ತಿಳಿದಿಲ್ಲ. ವಿದ್ಯಾವಂತರಾಗುವುದರ ಜತೆಗೆ ಪ್ರೀತಿ, ಸ್ನೇಹ, ಪರೋಪಕಾರದಂತಹ ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು. ಹೃದಯವಂತರಾಗಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಸರಸ್ವತಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಕಿವಿಮಾತು ಹೇಳಿದರು.
ಉಡುಪಿಯ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗ ಮತ್ತು ಗಿಳಿವಿಂಡು (ರಿ.), ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ಬುಧವಾರ (ಸೆ.23) ಆಯೋಜಿಸಿದ್ದ 'ಸೊಗಮಕ್ಕೆ' ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, 'ಮಂಕುತಿಮ್ಮನ ಕಗ್ಗ'ದ ಮೂಲಕ ವಿವಿಧ ಜೀವನಾದರ್ಶಗಳನ್ನು ಉಲ್ಲೇಖಿಸಿದರು.
ಗಿಳಿವಿಂಡು ಸಂಸ್ಥೆಯ ಅಧ್ಯಕ್ಷ ಪ್ರೊ. ಶಿವರಾಮ್ ಶೆಟ್ಟಿ ಮಾತನಾಡಿ, ವಿಶೇಷ ಉಪನ್ಯಾಸ ಸರಣಿಯ ಆಶಯ ಹಾಗೂ ಉದ್ದೇಶ ತಿಳಿಸಿದರು. ಕಾಲೇಜ್ನ ಹಿರಿಯ ಪ್ರಾಧ್ಯಾಪಕಿ ಹಮೀದಾ ಭಾನು ಅಧ್ಯಕ್ಷತೆ ವಹಿಸಿದ್ದರು.
ಕಾಲೇಜ್ನ ಕನ್ನಡ ವಿಭಾಗದ ಮುಖ್ಯಸ್ಥ ಮಾರುತಿ ಸ್ವಾಗತಿಸಿದರು. ಸಂಸ್ಥೆಯ ಸದಸ್ಯ ಪ್ರೊ. ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನಾತಕೋತ್ತರ ವಿಭಾಗದ ಸಂಯೋಜಕಿ ರತ್ನಮಾಲಾ ವಂದಿಸಿದರು. ಉಪನ್ಯಾಸಕಿ ಭವ್ಯಾ ಕಾರ್ಯಕ್ರಮ ನಿರೂಪಿಸಿದರು.