

ಉಡುಪಿ: ಜನರನ್ನು ಹಲವು ಪಾತ್ರ, ಕೆಲಸ, ವೃತ್ತಿಯ ಮೂಲಕ ಗುರುತಿಸಲಾಗುತ್ತದೆ. ಆದರೆ, 'ಕನ್ನಡ ಭಾಷಿಕ' ಎಂದು ಗುರುತಿಸುವುದು ನಮ್ಮ ಹೆಮ್ಮೆ. ಕೆಲವರು ಬಹು ಗುರುತು ಹೊಂದಿದ್ದು, ಅವುಗಳ ವಿವಿಧ ಪದರಗಳನ್ನು ದಾಟಿ ವಿಶ್ವಮಾನವರಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ.ಶಿವರಾಮ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ, ಗಿಳಿವಿಂಡು (ರಿ.) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಭಾಗಿತ್ವದಲ್ಲಿ ಬುಧವಾರ (ಸೆ.23) ಆಯೋಜಿಸಿದ್ದ 'ನಮ್ಮ ಕನ್ನಡ; ನಮ್ಮ ಗುರುತು' ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜ್ನ ಪ್ರಾಂಶುಪಾಲೆ ಪ್ರೊ. ನಿಕೇತನಾ ಮಾತನಾಡಿ, ಕನ್ನಡ ಸ್ವಾಭಿಮಾನದ ಭಾಷೆ. ಶಿಕ್ಷಣವು ಕೇವಲ ಅಂಕ ಗಳಿಸುವ ಸಾಧನವಾಗದೆ, ನೈತಿಕತೆ ಹಾಗೂ ಸಚ್ಚಾರಿತ್ರ್ಯ ರೂಪಿಸುವಂತಾಗಬೇಕು ಎಂದು ಆಶಿಸಿದರು.
ವಿದ್ಯಾರ್ಥಿನಿಯರಾದ ಸಮೀಕ್ಷಾ, ಭವ್ಯಶ್ರೀ ಪ್ರಾರ್ಥಿಸಿದರು. ಕಾಲೇಜ್ನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಪಿ.ಬಿ. ಪ್ರಸನ್ನ ಸ್ವಾಗತಿಸಿದರು. ಗೋವಿಂದ ದಾಸ ಕಾಲೇಜ್ನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಚಂದ್ರ ವಂದಿಸಿದರು.