

ಉಡುಪಿ: ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ದಸರಾ ಮಹೋತ್ಸವದ ರಥ ಸಾಗುತ್ತಿದೆ. ಅದು ಕನ್ನಡದ ರಥವಾಗಿದ್ದು, ಮುಂದೆಯೂ ಸಾಂಗವಾಗಿ ಸಾಗಲಿ. ದಸರಾ ಮಹೋತ್ಸವವು ಶಕ್ತಿದೇವತೆಯಾದ ಚಾಮುಂಡೇಶ್ವರಿ ದೇವಿಯ ಕೃಪೆಯಿಂದ ಚೆನ್ನಾಗಿ ನಡೆಯಲಿ. ಯಾವ ಲೋಪ&ದೋಷಗಳಾಗದಿರಲಿ. ಮಳೆಯಾಗಿ, ಚೆನ್ನಾಗಿ ಬೆಳೆ ಬಂದು ನಮ್ಮ ರೈತರ ಜತೆಗೆ ನಾಡಿನ ಜನತೆ ಖುಷಿಯಿಂದ ಇರುವಂತಾಗಲಿ ಎಂದು ಹಿರಿಯ ಲೇಖಕಿ ವೈದೇಹಿ ಆಶಯ ವ್ಯಕ್ತಪಡಿಸಿದರು.
ದಸರಾ ಮಹೋತ್ಸವ ಅಂಗವಾಗಿ ಮೈಸೂರಿನಲ್ಲಿ ನಡೆಯುವ ಕವಿಗೋಷ್ಠಿ ಉದ್ಘಾಟನೆಗೆ ಆಗಮಿಸಬೇಕೆಂದು ಆಹ್ವಾನಿಸಲು ಮೈಸೂರಿನ ದಸರಾ ಕವಿಗೋಷ್ಠಿ ಉಪಸಮಿತಿಯು ಮಣಿಪಾಲದ ಅನಂತನಗರದಲ್ಲಿರುವ ತಮ್ಮ ನಿವಾಸ 'ಇರುವಂತಿಗೆ'ಗೆ ಶುಕ್ರವಾರ (ಸೆ.25) ಆಗಮಿಸಿ ಆಮಂತ್ರಣ ನೀಡಿದ ಬಳಿಕ ಮಾತನಾಡಿದರು.
ನನಗಂತೂ ತೀವ್ರ ಕುತೂಹಲ
ಐದು ಕವಿಗೋಷ್ಠಿಗಳಿಗೆ ಜನರು ಹೆಚ್ಚು ಸೇರುತ್ತಾರೆ. ಕೇಳುವವರೂ ಹೆಚ್ಚಿದ್ದಾರೆ. ಶ್ರವಣ ಮುಖ್ಯ. ಅದರಿಂದ ವಿವಿಧ ಕವಿಗಳ ಕವನಗಳನ್ನು ಆಲಿಸಲು ಸಹೃದಯರು ಹೆಚ್ಚುವುದೂ ಸಹಜ. ನನಗಂತೂ ಹೊಸ ತಲೆಮಾರಿನ ಕವಿಗಳು ಕಾವ್ಯಕ್ಕೆ ಹೇಗೆ ಸ್ಪಂದಿಸುತ್ತಾರೆ ಎನ್ನುವ ಕುತೂಹಲವಿದೆ ಎಂದರು.
2007ರಲ್ಲಿ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ದಸರಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದೆ. ಇದಕ್ಕೂ ಮೊದಲೊಮ್ಮೆ ದಸರಾ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ್ದೆ ಎಂದು ಸ್ಮರಿಸಿದರು.
ಕವಿಗೋಷ್ಠಿ ಉಪಸಮಿತಿಯ ಉಪವಿಶೇಷಾಧಿಕಾರಿ ಡಾ. ಎಂ.ದಾಸೇಗೌಡ, ಕಾರ್ಯಾಧ್ಯಕ್ಷ ಪ್ರೊ.ನಂಜಯ್ಯ ಹೊಂಗನೂರು, ಕಾರ್ಯದರ್ಶಿ ಆನಂದ್ ಎಂ.ಬಿ., ಕವಿಗೋಷ್ಠಿ ಉಪಸಮಿತಿಯ ಸಮನ್ವಯಾಧಿಕಾರಿ ಡಾ.ಉಮೇಶ ಬೇವಿನಹಳ್ಳಿ, ಡಾ.ತ್ರಿವೇಣಿ, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕರಾದ ಸಿದ್ದನಾಗಪ್ಪ ಬಿ.ಬಿ. ಹಾಗೂ ಚಂದನಾ, ವೈದೇಹಿ ಪುತ್ರಿ ಚಿತ್ರಕಲಾವಿದೆ ಪಲ್ಲವಿ ಅನಿಲ್, ಅಳಿಯ ಟಿ.ಅನಿಲಕುಮಾರ್ ಉಪಸ್ಥಿತರಿದ್ದರು.