ಸೆ.30ರಿಂದ ಎಸ್​ಡಿಎಂ ಆಸ್ಪತ್ರೆಯಲ್ಲಿ ಕ್ಷಮತ್ವಂ ಅಂತಾರಾಷ್ಟ್ರೀಯ ಸಮ್ಮೇಳನ

ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್​ಡಿಎಂ) ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸೆ. 30 ಮತ್ತು ಅ. 1ರಂದು ಕ್ಷಮತ್ವಂ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ
sdm seminar
ಎಸ್‌ ಡಿ ಎಂ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಉಡುಪಿ: ಸಾಂಪ್ರದಾಯಿಕ ಆಯುರ್ವೇದ ಜ್ಞಾನ ಮತ್ತು ಆಧುನಿಕ ರೋಗನಿರೋಧಕ ವಿಜ್ಞಾನದ ನಡುವೆ ವೈಜ್ಞಾನಿಕ ಸೇತುವೆ ನಿರ್ಮಿಸುವ ಉದ್ದೇಶದಿಂದ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್​ಡಿಎಂ) ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸೆ. 30 ಮತ್ತು ಅ. 1ರಂದು ಕ್ಷಮತ್ವಂ- ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 30ರಂದು ಬೆಳಗ್ಗೆ 10 ಗಂಟೆಗೆ ಭಾವಪ್ರಕಾಶ ಸಬಾಂಗಣದಲ್ಲಿ ಧರ್ಮಸ್ಥಳದ ಧಮಾರ್ಧಿಕಾರಿ, ಎಸ್​ಡಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್​ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಯುಷ್​ ಮಂತ್ರಾಲಯದ ಸಲಹೆಗಾರ ಡಾ. ಕೌಸ್ತುಭ್​ ಉಪಾಧ್ಯಾಯ, ಭಾರತೀಯ ವೈದ್ಯಕಿಯ ಪದ್ಧತಿಯ ರಾಷ್ಟ್ರೀಯ ಆಯೋಗದ ಅಧ್ಯೆ ಪ್ರೊ. (ಡಾ.) ಮನೀಷಾ ಉಪೇಂದ್ರ ಕೊಠೇಕರ್​ ಹಾಗೂ ಕರ್ನಾಟಕ ಆಯುಷ್​ ಇಲಾಖೆ ಆಯುಕ್ತ ಡಾ. ಸುನಿಲ್​ ಪನ್ವಾರ್​ ಭಾಗವಹಿಸಲಿದ್ದಾರೆ ಎಂದರು.

ಆಟೋಇಮ್ಯೂನ್​ ಕಾಯಿಲೆಗಳಲ್ಲಿ ಆಯುರ್ವೇದದ ಅನ್ವಯಿಕತೆ: ಜಾಗತಿಕ ಆರೋಗ್ಯ ರಕ್ಷಣೆಯೊಂದಿಗೆ ಪಾರಂಪರಿಕ ಜ್ಞಾನದ ಅನುಸಂಧಾನ ಎಂಬ ವಿಷಯದಡಿ ವೈಜ್ಞಾನಿಕ ಚರ್ಚೆಗಳು ಜರುಗಲಿವೆ. ಆಯುರ್ವೇದದ ಮೂಲ ತತ್ವಗಳಾದ ವ್ಯಾಧಿಕ್ಷಮತ್ವ, ಓಜಸ್​, ಅಗ್ನಿ, ರಸಾಯನ ಹಾಗೂ ಪಂಚಕರ್ಮ ಚಿಕಿತ್ಸೆಗಳನ್ನು ಆಧುನಿಕ ಎಪಿಜೆನೆಟಿಕ್ಸ್​ ಮತ್ತು ಇಮ್ಯುನಾಲಜಿ ಜತೆ ಸಮನ್ವಯಗೊಳಿಸುವ ಕುರಿತು ಸಮಾಲೋಚನೆ ನಡೆಯಲಿದೆ ಎಂದರು.

ಕಾರ್ಯಕ್ರಮ ಸಂಯೋಜಕ ಡಾ. ಪ್ರಸನ್ನ ಮೊಗಸಾಲೆ ಮಾತನಾಡಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿಶ್ವದ ಪ್ರಮುಖ ವಿಷಯ ತಜ್ಞರು ದಿಕ್ಸೂಚಿ ಭಾಷಣ ಹಾಗೂ ವೈಜ್ಞಾನಿಕ ಉಪನ್ಯಾಸ ನೀಡಲಿದ್ದಾರೆ. ಅಖಿಲ ಭಾರತ ಆಯುರ್ವೇದ ಸಂಸ್ಥೆ ಪ್ರೊಫೆಸರ್​ ಎಮೆರಿಟಸ್​ ಡಾ. ಶ್ರೀನಿವಾಸ ಹೆಜ್ಮಾಡಿ ಆಚಾರ್ಯ,

ಡಾ. ವಿಶ್ವೇಶ್ವರಯ್ಯ ಪ್ರಕಾಶ್​ , ಡಾ. ಭೂಷಣ್​ ಪಟವರ್ಧನ್​, ಡಾ. ಜಾರ್ಜ್​ ಲೂಯಿಸ್​ ರ್ಬರಾ (ಅರ್ಜೆಂಟೀನಾ), ಡಾ. ಕ್ರಿಶ್ಚಿಯನ್​ ಕೆಸ್ಲರ್​ (ಜರ್ಮನಿ). ಡಾ. ಆಂಟೋನಿಯೊ ಮೊರಾಂಡಿ (ಇಟಲಿ) ಹಾಗೂ ಡಾ. ಅನಿತಾ ಕರಿಲಿಯೊ ರೋರ್ಕಾಸ್​ (ರಷ್ಯಾ), ಡಾ. ರಾಮಮನೋಹರ್​ ಪುತಿಯೇಡತ್​ (ಕೇರಳ), ಡಾ. ಶಶಿಕಿರಣ್​ ಉಮಾಕಾಂತ್​ (ಉಡುಪಿ), ಡಾ. ಕಿಶೋರ್​ ಕುಮಾರ್​ (ನಿಮ್ಹಾನ್ಸ್​), ಡಾ. ಪ್ರಶಾಂತ್​ ಎ.ಎಸ್​. (ಹುಬ್ಬಳ್ಳಿ) ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಸಮ್ಮೇಳನಕ್ಕಾಗಿ ಈಗಾಗಲೇ 1,500ಕ್ಕೂ ಹೆಚ್ಚು ನೋಂದಣಿಗಳಾಗಿದ್ದು, 2,000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಒಟ್ಟು 530 ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ. ಸಮ್ಮೇಳನದ ಭಾಗವಾಗಿ ಬೃಹತ್​ ಆಯುರ್ವೇದ ಎಕ್ಸ್​ಪೋ' ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮ ಸಂಟನ ಸಮಿತಿ ಪದಾಧಿಕಾರಿಗಳಾದ ಡಾ. ನಾಗರಾಜ್​ ಎಸ್​., ಡಾ. ಚೈತ್ರಾ ಹೆಬ್ಬಾರ್​, ಡಾ. ಅನಂತ ಕುಮಾರ್​, ಡಾ. ಅರ್ಪಣಾ ಜೈನ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net