ಆಯುರ್ವೇದದ ಶಾಸ್ತ್ರೀಯ ತಿಳಿವಳಿಕೆ ಅತ್ಯಗತ್ಯ

ಉಡುಪಿಯ ಎಸ್​ಡಿಎಂ ಕಾಲೇಜ್​ನಲ್ಲಿ ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಡಾ. ಮುರಳೀಧರ ಶರ್ಮ ಉದ್ಘಾಟಿಸಿದರು. ಡಾ. ಮಮತಾ ಕೆ.ವಿ., ಡಾ. ನಿರಂಜನ ರಾವ್​, ಡಾ. ನಾಗರಾಜ ಎಸ್​., ಡಾ. ಸರಿತಾ ಟಿ. ಇತರರಿದ್ದರು.
ಉಡುಪಿಯ ಎಸ್​ಡಿಎಂ ಕಾಲೇಜ್​ನಲ್ಲಿ ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಡಾ. ಮುರಳೀಧರ ಶರ್ಮ ಉದ್ಘಾಟಿಸಿದರು. ಡಾ. ಮಮತಾ ಕೆ.ವಿ., ಡಾ. ನಿರಂಜನ ರಾವ್​, ಡಾ. ನಾಗರಾಜ ಎಸ್​., ಡಾ. ಸರಿತಾ ಟಿ. ಇತರರಿದ್ದರು.
Published on: 

* ಪ್ರೊಫೆಸರ್​ ಎಮಿರಿಟಸ್​ ಡಾ. ಮುರಳೀಧರ ಶರ್ಮ ಅಭಿಪ್ರಾಯ

* ಎಸ್​ಡಿಎಂ ಕಾಲೇಜ್​ನಲ್ಲಿ ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ

ಉಡುಪಿ: ಇತ್ತೀಚೆಗಿನ ದಶಕದಲ್ಲಿ ಮೂತ್ರಪಿಂಡ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚತೊಡಗಿದೆ. ಈ ಹಿನ್ನೆಲೆಯಲ್ಲಿ ಮೂತ್ರ ಸಂಬಂಧಿ ಕಾಯಿಲೆಗಳ ಕುರಿತು ಆಯುರ್ವೇದದ ಶಾಸ್ತ್ರೀಯ ತಿಳಿವಳಿಕೆ ಎಲ್ಲ ವೈದ್ಯರಿಗೂ ಅತ್ಯಗತ್ಯ. ಆಧುನಿಕ ರೀತಿಯಲ್ಲಿ ಆ ರೋಗಪತ್ತೆ ವಿಧಾನಗಳನ್ನು ತಿಳಿದುಕೊಳ್ಳಲು ಅಥವಾ ಜ್ಞಾನ ಹೊಂದಲು ಸಿಕೆಡಿ ಕಾರ್ಯಾಗಾರ ಪೂರಕವಾಗಿದೆ ಎಂದು ಎಸ್​ಡಿಎಂ ಕಾಲೇಜ್​ನ ಪ್ರೊಫೆಸರ್​ ಎಮಿರಿಟಸ್​ ಡಾ. ಮುರಳೀಧರ ಶರ್ಮ ಅಭಿಪ್ರಾಯಪಟ್ಟರು.

ಉಡುಪಿ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ವತಿಯಿಂದ ಹಾಗೂ ನವದೆಹಲಿಯ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ (ಆರ್​ಎವಿ)ದ ಆಯುರ್ಜ್ಞಾನ ಯೋಜನೆಯಡಿ ಕೇಂದ್ರ ಆಯುಷ್​ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ 'ಬಸ್ತಿ ವಿಕಾರ; ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆ (ಸಿಕೆಡಿ)ಯ ವಿಶೇಷ ಉಲ್ಲೇಖದೊಂದಿಗೆ' ಎಂಬ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವೈದ್ಯರಿಂದ ವಿಚಾರ ಮಂಡನೆ

ವೈಜ್ಞಾನಿಕ ಅವಧಿಗಳಲ್ಲಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜ್​ನ ಮೂತ್ರಪಿಂಡಶಾಸ್ತ್ರ (ನೆಫ್ರಾಲಜಿ) ವಿಭಾಗದ ಸಹ ಪ್ರಾಧ್ಯಾಪಕ ಡಾ. ಶ್ರೀನಿವಾಸ ವಿ. ಶೆಣೈ 'ಸಿಕೆಡಿಯ ಸವಾಲುಗಳು ಮತ್ತು ನಿರ್ವಹಣಾ ಕ್ರಮ'ಗಳ ಕುರಿತು ಮಾತನಾಡಿದರು. ಮಣಿಪಾಲ್​ ಹೆಲ್ತ್​ಮ್ಯಾಪ್​ನ ಡಾ. ಪ್ರವೀಣ ಎನ್​. ಶಾಸ್ತ್ರಿ 'ಮೂತ್ರಪಿಂಡ, ಮೂತ್ರನಾಳ ಮತ್ತು ಮೂತ್ರಕೋಶ (ಕೆಯುಬಿ)ದ ಕಾಯಿಲೆಗಳ ರೇಡಿಯಾಲಜಿ ಆಧಾರಿತ ಪತ್ತೆ' ಕುರಿತು ಹಾಗೂ ಎಸ್​ಡಿಎಂ ಆಯುರ್ವೇದ ಮತ್ತು ಸಂಬಂಧಿತ ವಿಜ್ಞಾನಗಳ ಸಂಶೋಧನಾ ಕೇಂದ್ರದ ಡಾ. ನವೀನಚಂದ್ರ ಎನ್​.ಎಚ್​. 'ಸಿಕೆಡಿ ಕಾಯಿಲೆಗಳ ಪ್ರಯೋಗಾಲಯ ಪತ್ತೆ' ಕುರಿತು ವಿಚಾರ ಮಂಡಿಸಿದರು.

ಕಾಲೇಜ್​ನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ (ಕ್ಲಿನಿಕಲ್​) ಡಾ. ನಿರಂಜನ ರಾವ್​ ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಹಾಗೂ ಸಂಘಟನಾ ಕಾರ್ಯದರ್ಶಿ ಡಾ. ನಾಗರಾಜ ಎಸ್​. ಸ್ವಾಗತಿಸಿದರು. ಡಾ. ಸರಿತಾ ಟಿ. ವಂದಿಸಿದರು.

ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ

ಕಾರ್ಯಾಗಾರದ 2ನೇ ದಿನ ಗುಜರಾತಿನ ನಡಿಯಾದ್​ನ ಮಗನಭಾಯ್​ ಅಡೆನ್​ವಾಲಾ ಮಹಾಗುಜರಾತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಎಸ್​.ಎನ್​. ಗುಪ್ತ 'ಆಯುರ್ವೇದದಲ್ಲಿ ಸಿಕೆಡಿಯ ತಿಳಿವಳಿಕೆ ಮತ್ತು ಚಿಕಿತ್ಸೆ' ಕುರಿತು ಎರಡು ಅವಧಿಗಳಲ್ಲಿ ಉಪನ್ಯಾಸ ನೀಡಿದರು. ಡಾ. ಪ್ರಸನ್ನ ಎನ್​. ಮೊಗಸಾಲೆ 'ಬಸ್ತಿ ವಿಕಾರದ ಕ್ಲಿನಿಕಲ್​ ಅಂಗರಚನೆ ಮತ್ತು ರೋಗೋತ್ಪತ್ತಿ' ಕುರಿತು ಮಾತನಾಡಿದರು. ಬಳಿಕ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಿತು. ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ವಿವಿಧ ಆಯುರ್ವೇದ ಕಾಲೇಜ್​ಗಳಿಂದ 50ಕ್ಕೂ ಅಧಿಕ ಅಧ್ಯಾಪಕರು ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ಮೂಡುಬಿದಿರೆಯ ಆಳ್ವಾಸ್​ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸುರೇಖಾ ಪೈ ಸಮಾರೋಪ ಭಾಷಣ ಮಾಡಿದರು. ಡಾ. ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಡಾ. ಸದಾನಂದ ಕೆ. ಸ್ವಾಗತಿಸಿದರು. ಡಾ. ಅರುಣಕುಮಾರ ಎಂ. ವಂದಿಸಿದರು. ಡಾ. ಗೀತಾಂಜಲಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net