ನಾಡಿನ ಕಬ್ಬು ಬೆಳೆಗಾರರಲ್ಲಿ ಇರಲಿ ತಾಳ್ಮೆ

ಕಬ್ಬು ಬೆಳೆಗಾರರಲ್ಲಿ ಡಿ.ಕೆ.ಶಿವಕುಮಾರ್ ಮನವಿ
ಉಚ್ಚಿಲ ದಸಾರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಶಾರದಾ ಮಾತೆಯ ದರ್ಶನ ಪಡೆದರು.
ಉಚ್ಚಿಲ ದಸಾರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಶಾರದಾ ಮಾತೆಯ ದರ್ಶನ ಪಡೆದರು.
Published on: 

ಪಡುಬಿದ್ರಿ: ನಾಡಿನ ಕಬ್ಬು ಬೆಳೆಗಾರರು ತಾಳ್ಮೆಯಿಂದ ಇರಬೇಕು. ಇದು ಕರ್ನಾಟಕದ ಸಮಸ್ಯೆ ಅಲ್ಲ, ರಾಷ್ಟ್ರದ ಎಲ್ಲ ಬೆಳೆಗಾರರ ಸಮಸ್ಯೆ. ಮಹಾರಾಷ್ಟ್ರದ ನಾಯಕರೊಂದಿಗೂ ಕಬ್ಬಿನ ಬೆಲೆ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಕಬ್ಬು ಬೆಳೆಗಾರರಲ್ಲಿ ಮನವಿ ಮಾಡಿದರು.

ಉಡುಪಿ ಜಿಲ್ಲೆ ಕಾಪುವಿನ ಶ್ರೀಕ್ಷೇತ್ರ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನದ ಬಳಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರು ಉಳಿಯಬೇಕು, ಕಾರ್ಖಾನೆಗಳು ಉಳಿಯಬೇಕು. ಇದು ನಮ್ಮ ಧ್ಯೇಯ. ಈ ಬಗ್ಗೆ ಕೇಂದ್ರ ಸರ್ಕಾರದ ಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ಅವರು ಸಭೆ ಕರೆದಿದ್ದಾರೆ. ಈ ಸಲ ಮಳೆ ಇಲ್ಲದೆ ಬೆಳೆ ಕೂಡ ಕಡಿಮೆಯಾಗಿದೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದರು.

ಕಳೆದ 10 ವರ್ಷಗಳಿಂದ ಸಕ್ಕರೆ, ಕಬ್ಬಿನ ಬೆಲೆಯಾಗಲಿ ಜಾಸ್ತಿಯಾಗಿಲ್ಲ. ಕಳೆದ ಸಲ ಸರ್ಕಾರದಿಂದ ಕಬ್ಬಿನ ಬೆಳೆಗಾರರಿಗೆ ನೆರವಾಗುವ ಬಗ್ಗೆ ಘೋಷಣೆ ಮಾಡಿದ್ದೆವು. ಅದನ್ನು ಮುಂದುವರಿಸುತ್ತೇವೆ. ಎಲ್ಲರೂ ಸ್ವಲ್ಪ ತಾಳ್ಮೆಯಿಂದ ಇರಿ. ಈ ಬಗ್ಗೆ ಚರ್ಚೆ ಮಾಡೋಣ ಎಂದು ಭರವಸೆ ನೀಡಿದರು.

ಎಸ್‌ಐಆರ್ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಭೇದವಿಲ್ಲದೆ ಎಲ್ಲರ ಮತವನ್ನು ಉಳಿಸಬೇಕು. ನಾಡಿನ ಜನತೆಗೆ ಮತದಾನ ಸಂವಿಧಾನ ನೀಡಿರುವ ಹಕ್ಕು. ಅದನ್ನು ರಕ್ಷಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ಎಂದರು.

ಕರಾವಳಿ ಪವಿತ್ರವಾದ ಭೂಮಿ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗದು. ಜನರ ಸೇವೆ ಮಾಡುವುದಕ್ಕೆ, ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಅವಕಾಶ ದೊರಕಿದೆ. ಮಹಾಲಕ್ಷ್ಮೀ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸುವುದಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net