

ವಿಜಯವಾಣಿ ಸುದ್ದಿಜಾಲ ಉಡುಪಿ: ಶ್ರೀ ಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಈ ಬಾರಿ ವೈಭವಪೂರ್ಣವಾಗಿ ಆಚರಿಸಲು ಉದ್ದೇಶಿಸಲಾಗಿದ್ದು, ಆ.1ರಿಂದ ಸೆ.1ರವರೆಗೆ ತಿಂಗಳ ಪರ್ಯಂತ ಶ್ರೀಕೃಷ್ಣ ಮಾಸೋತ್ಸವ, ಕೃಷ್ಣಜನ್ಮಾಷ್ಟಮಿ, ಶ್ರೀಕಷ್ಣ್ಣ ಲೀಲೋತ್ಸವ, ಲಡ್ಡೋತ್ಸವ, ಸಾಮೂಹಿಕ ಡೋಲೋತ್ಸವ ನಡೆಯಲಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.
ಈ ಬಾರಿ ವಿಶೇಷವಾಗಿ ಲಡ್ಡೋತ್ಸವದಲ್ಲಿ 108 ಬಗೆಯ ಲಡ್ಡುಗಳನ್ನು ತಯಾರಿಸಿ ಭಕ್ತರಿಗೆ ವಿತರಿಸಲಾಗುವುದು. ಜನ್ಮಾಷ್ಟಮಿಗೆ ಅನೇಕ ಬಗೆಯ ಲಡ್ಡು, ಚಕ್ಕುಲಿ ಮಾಡುವುದು ಸಂಪ್ರದಾಯ. ಕಾಲಕ್ರಮೇಣ ಈ ಸಂಪ್ರದಾಯ ಕ್ಷೀಣಿಸಿದೆ. ಈ ವೈಭವ ಮತ್ತೆ ಮರುಕಳಿಸುವ ನಿಟ್ಟಿನಲ್ಲಿ ಹಳೇ ಕಾಲದ ವಿವಿಧ ಬಗೆಯ ಲಡ್ಡುಗಳನ್ನು ಕೃಷ್ಣ ದೇವರಿಗೆ ಸಮರ್ಪಣೆ ಮಾಡಲಾಗುವುದು. ಲಡ್ಡು ತಯಾರಿಸುವ ವಿಧಾನವನ್ನು ಭಕ್ತರಿಗೆ ತಿಳಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ.1ರಂದು ಮಾಸೋತ್ಸವದ ಉದ್ಘಾಟನೆ ನಡೆಯಲಿದೆ. 22ರಂದು ಲಡ್ಡೋತ್ಸವ ಆಯೋಜಿಸಲಾಗಿದೆ. 26ರಂದು ಜನ್ಮಾಷ್ಟಮಿ ದಿನ ಸಾಮೂಹಿಕ ತೊಟ್ಟಿಲು ಸೇವೆ, ಮುದ್ದುಕೃಷ್ಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿ 12.08ಕ್ಕೆ ಅರ್ಘ್ಯ ಪ್ರದಾನ ನಡೆಯಲಿದೆ. 27ರಂದು 3ಕ್ಕೆ ಶ್ರೀಕೃಷ್ಣ ಲೀಲೋತ್ಸವ, ರಥೋತ್ಸವ, ಹುಲಿವೇಷ ಕುಣಿತ ನಡೆಯಲಿದೆ. 28ರಂದು ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಹೀಗೆ ಕೃಷ್ಣನ ಸನ್ನಿಧಿಯಲ್ಲಿ ಶ್ರೀಕೃಷ್ಣ ಜಯಂತ್ಯುತ್ಸವವನ್ನು ಶ್ರೀಕೃಷ್ಣವಾಸೋತ್ಸವವನ್ನಾಗಿ ಒಂದು ತಿಂಗಳು ವೈಭವದಿಂದ ನಡೆಸಲು ಸಂಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಠದ ದಿವಾನ್ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಮೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಆ.1ರಂದು ಸಂಜೆ 5 ಗಂಟೆಗೆ ವಾಸೋತ್ಸವವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಅದವಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಭಂಡಾರಕೇರಿ ಮಠ ಶ್ರೀ ವಿದ್ವೇಶ ತೀರ್ಥ ಶ್ರೀಪಾದರು, ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ವಾಜಿ ಶಾಸಕ ರಘುಪತಿ ಭಟ್, ಉದ್ಯಮಿಗಳಾದ ನಾಡೋಜ ಜಿ.ಶಂಕರ್, ಪ್ರಸಾದ್‌ರಾಜ್ ಕಾಂಚನ್, ವಾಹೆ ಸಹ ಕುಲಾಧಿಪತಿ ಎಚ್.ಎಸ್.ಬಳ್ಳಾಲ್, ಪ್ರೊ.ರಾಧಾಕೃಷ್ಣ ಭಾಗವಹಿಸಲಿದ್ದಾರೆ. ಪರ್ಯಾಯ ಶ್ರೀಗಳಾದ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಆನ್‌ಲೈನ್ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮಕ್ಕೂ ಮುನ್ನ ಸಂಜೆ 4 ಗಂಟೆಯಿಂದ ರಾಜಾಂಗಣದೆಡೆಗೆ ಶೋಭಾಯಾತ್ರೆ ನಡೆಯಲಿದೆ.