ತಜ್ಞರಿಂದ ಎಂ11 ಬಯೋ ಡೀಸೆಲ್ ಘಟಕ ಪರಿಶೀಲನೆ

pbd_dc soochane
Published on

ಪಡುಬಿದ್ರಿ: ನಂದಿಕೂರು ಎಂ11 ಬಯೋ ಡೀಸೆಲ್ ಘಟಕದಲ್ಲಿ ಉಂಟಾಗುತ್ತಿರುವ ಪರಿಸರಮಾಲಿನ್ಯ ತಡೆಗೆ ಎನ್‌ಐಟಿಕೆ ತಜ್ಞರನ್ನು ಕರೆಸಿ ಪರಿಶೀಲನೆ ನಡೆಸುವಂತೆ ಪರಿಸರಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗೆ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.

ಘಟಕದಿಂದ ಆಗುತ್ತಿರುವ ಮಾಲಿನ್ಯದ ಬಗ್ಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರೊಂದಿಗೆ ಸೋಮವಾರ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಕಂಪನಿಗೆ ಬೇಕಾದ ಅಗತ್ಯ ನೀರಿಗೆ ಮಳೆ ನೀರು ಕೊಯ್ಲಿ, ಕೆರೆ ನಿರ್ಮಾಣ ಮಾಡಬೇಕು. ಕಂಪನಿ ಆವರಣದ ಒಳಗಡೆ ನೀರು ಯಾವುದೇ ಕಾರಣಕ್ಕೂ ಹೊರಗೆ ಬಿಡದಂತೆ ಎಚ್ಚರವಹಿಸಬೇಕು ಎಂದರು.

ಉಡುಪಿ ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ಮಾತನಾಡಿ, ಸ್ಥಳೀಯರಿಗೆ ನೀಡಿದ ಉದ್ಯೋಗ ಬಗ್ಗೆ ವಿಳಾಸ ಸಹಿತ ವಿವರ ಹಾಗು ಕಚ್ಚಾವಸ್ತು ವಾಹನದಲ್ಲಿ ಬರುವ ವೇಳೆ ಹೊರಚೆಲ್ಲದಂತೆ ಕ್ರಮಕೈಗೊಳ್ಳಬೇಕು ಎಂದರು.

ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಕೀರ್ತಿ ಕುಮಾರ್, ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್‌ಚಂದ್ರ, ತಹಸೀಲ್ದಾರ್ ಪ್ರತಿಭಾ ಆರ್., ತಾಪಂ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಡಿವೈಎಸ್‌ಪಿ ಅರವಿಂದ ಕಲಗುಜ್ಜಿ, ಕಂದಾಯ ನಿರೀಕ್ಷಕ ಇಜಾಝ್ ಸಾಬಿರ್ ಉಪಸ್ಥಿತರಿದ್ದರು.

ಸ್ಥಳೀಯರಿಗೆ ಶೇ.70 ಉದ್ಯೋಗ

ಮಾಲಿನ್ಯ ನಿಯಂತ್ರಣಕ್ಕೆ ಬೇಕಾದ ಎಲ್ಲ ವೈಜ್ಞಾನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸ್ಥಳೀಯರಿಗೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಶೇ.70 ಉದ್ಯೋಗ ನೀಡಬೇಕು ಎಂದು ಕಂಪನಿ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net