ಭಾರಿ ಮಳೆಗೆ ಉಡುಪಿ ತತ್ತರ: 50 ಕುಟುಂಬಗಳ ರಕ್ಷಣೆ,‌ ಎನ್​ಡಿಆರ್​ಎಫ್ ದೌಡು

Udupi
Published on

ಉಡುಪಿ: ಜಿಲ್ಲೆಯ ಇತಿಹಾಸದಲ್ಲಿ ಮೊದಲ ಭಾರಿಗೆ ಭಾರಿ ನೆರೆ ಹಾವಳಿಯಿಂದ ಉಡುಪಿ ನಗರದ ಜನ ಜೀವನ ಅಸ್ತವ್ಯಸ್ಥಗೊಂಡಿದೆ.

ಕೃತಕ‌ ನೆರೆಯಿಂದಾಗಿ ಉಡುಪಿ ಕಲ್ಸಂಕ ಮಣಿಪಾಲ, ಗುಂಡಿಬೈಲು, ಮಲ್ಪೆ ರಸ್ತೆಗಳ ಸಂಚಾರ ಬಂದ್ ಆಗಿದೆ. ಅಂಬಲಪಾಡಿ, ಮಠದ ಬೆಟ್ಟು, ಗುಂಡಿಬೈಲು, ಬನ್ನಂಜೆ,‌ಕಾಪು ಸೇರಿದಂತೆ ಹಲವು ಭಾಗದಲ್ಲಿ ನೆರೆ ಹಾವಳಿ‌ ತೀವ್ರವಾಗಿದ್ದು, ಇಲ್ಲಿವರೆಗೆ 50 ಕುಟುಂಬಗಳನ್ನು ರಕ್ಷಣೆ ಮಾಡಲಾಗಿ, ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ವಿಜಯವಾಣಿಗೆ ತಿಳಿಸಿದ್ದಾರೆ.

ಉಡುಪಿ ಪೊಲೀಸರು, ಅಗ್ನಿಶಾಮಕ ದಳ ತಡರಾತ್ರಿಯಿಂದ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ಉಡುಪಿಗೆ ಎನ್ ಡಿ ಆರ್ ಎಫ್ ಪಡೆಯನ್ನು ಕರೆಸಿಕೊಳ್ಳಲಾಗುತ್ತಿದೆ. ನೆರೆ ಸಂಕಷ್ಟದಲ್ಲಿ ಸಿಲುಕಿದ್ದರೆ ರಕ್ಷಣೆಗೆ ಸಾರ್ವಜನಿಕರು ತುರ್ತು 1077 ಕಂಟ್ರೋಲ್ ರೂಂ ಗೆ ಸಂಪರ್ಕಿಸಲು ಡಿಸಿ ಕೋರಿದ್ದಾರೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಜನತೆ ಭಾನುವಾರ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ನೆರೆಯಿಂದ ಬೆಚ್ಚಿ ಬಿದ್ದಿದ್ದಾರೆ . ಜನಜೀವನ ಅಸ್ತವ್ಯಸ್ಥಗೊಂಡಿದ್ದು. ಉಡುಪಿ ನಗರ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ.

ಭೀಕರ ಮಳೆಯ ಪರಿಣಾಮ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಆವರಣ, ನಗರದ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು. ನಗರದ ಅಂಗಡಿ ಗೋದಾಮುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಭಾರಿಯ ಮಳೆಯ ಪರಿಣಾಮ ಸ್ವರ್ಣ, ಸೀತನದಿ ಉಕ್ಕಿ ಹರಿಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net