

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಬದುಕು ಕಟ್ಟೋಣ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ನೇತೃತ್ವದಲ್ಲಿ ತಾಲೂಕು ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಎರಡೇ ತಿಂಗಳಿನಲ್ಲಿ ಶ್ರಮದಾನದ ಮೂಲಕ ಉಜಿರೆ ಹಳೆಪೇಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನವೀಕರಿಸಿದ್ದು, ಶುಕ್ರವಾರ ಪ್ರಾರಂಭೋತ್ಸವ ಸಮಾರಂಭದಲ್ಲಿ ಹಸ್ತಾಂತರಿಸಲಾಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಮಾತನಾಡಿ, ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣವಿದ್ದಲ್ಲಿ ಕಲಿಯುವಿಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ವಿದ್ಯೆ ಮತ್ತು ಬೆಳಕನ್ನು ಇತರರಿಗೆ ಕೊಟ್ಟಷ್ಟು ಹೆಚ್ಚಾಗುತ್ತದೆ. ಸಮಸ್ಯೆಯನ್ನು ಸೇವೆಯ ಅವಕಾಶವಾಗಿ ಪರಿವರ್ತಿಸಿ ಕೇವಲ ಎರಡು ತಿಂಗಳಿನಲ್ಲಿ ಶ್ರಮದಾನದ ಮೂಲಕ ಶಾಲಾ ಕಟ್ಟಡ ನವೀಕರಣಗೊಳಿಸಿರುವುದಕ್ಕೆ ಸಕ್ರಿಯ ಸಹಕಾರ ನೀಡಿದ ಎಲ್ಲರೂ ಅಭಿನಂದನಾರ್ಹರು ಎಂದರು.
ನವೀಕರಣ ಕಾರ್ಯದಲ್ಲಿ ಸಹಕರಿಸಿದ ರಜನೀಶ್, ಶಶಿ ಆಚಾರ್ ಬೆಳಾಲು, ಸುರೇಶ್, ಅಶೋಕ ನಾಯ್ಕ ಮತ್ತು ಮಧುಕರ ಅವರನ್ನು ಗೌರವಿಸಲಾಯಿತು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಬದುಕು ಕಟ್ಟೋಣ ತಂಡ ಸಂಚಾಲಕ ಮೋಹನ ಕುಮಾರ್ ಮತ್ತು ರಾಜೇಶ್ ಪೈ, ಪುಷ್ಪರಾಜ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಮೋಹನ್, ಇಂಜಿನಿಯರ್ ವಿದ್ಯಾಕುಮಾರ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಆರತಿ ಉಪಸ್ಥಿತರಿದ್ದರು. ಗುಲಾಬಿ ಹೂ ನೀಡಿ ಸ್ವಾಗತಿಸಲಾಯಿತು. ಮುಖ್ಯಶಿಕ್ಷಕಿ ಸಾವಿತ್ರಿ ಸ್ವಾಗತಿಸಿ, ವಂದಿಸಿದರು.