ಅಣ್ಣ-ತಂಗಿ ಬಾಂಧವ್ಯ ಬೆಸೆಯುವ ಉದ್ಭವ ನಾಗಪ್ಪ

Kailancha-Ph-02-Nagappa Temple-Ganesha Habba-Story Photo Nagaappa Sile- 6-9-2024
Published on

* ಹೊರ ಜಿಲ್ಲೆಗಳಿಂದಲೂ ಅಪಾರ ಭಕ್ತರ ಆಗಮನ

*ಭಕ್ತರೇ ಇಲ್ಲಿ ಅರ್ಚಕರು

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಗಣೇಶ ಹಬ್ಬದಿನದಂದು ಸಹೋದರ-ಸಹೋದರಿಯರು ದೇವಾಲಯಕ್ಕೆ ಬಂದು ಪೂಜಿಸಿದರೆ ಬಾಂಧವ್ಯ ಗಟ್ಟಿಯಾಗುತ್ತದೆ ಎಂಬ ನಂಬಿಕೆ ಜನಜನಿತವಾಗಿದ್ದು, ಈ ಪೂಜೆಗೆ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಉದ್ಭವ ನಾಗಪ್ಪ ದೇವಾಲಯ ಹೆಸರುವಾಸಿಯಾಗಿದೆ.

ಸುತ್ತಮುತ್ತಲ ಗ್ರಾಮಗಳ ಆರಾಧ್ಯ ದೈವವಾಗಿದ್ದು, ಜಿಲ್ಲೆ, ಹೊರ ಜಿಲ್ಲೆಗಳಿಂದಲೂ ಅಪಾರ ಭಕ್ತರ ನೆಚ್ಚಿನ ದೈವವಾಗಿದೆ. ಉದ್ಭವಮೂರ್ತಿ ನಾಗಪ್ಪ ದೇವಾಲಯಕ್ಕೆ ಐನೂರು ವರ್ಷಗಳ ಐತಿಹಾಸವಿದ್ದು, ವಿಶೇಷವೆಂದರೆ ಇಲ್ಲಿ ಅರ್ಚಕರೇ ಇಲ್ಲ, ಭಕ್ತರೇ ಅರ್ಚಕರು.

ದೇವಾಲಯದ ಗರ್ಭಗುಡಿ ಕಲ್ಲು, ಹೊರಗಿನ ಕಲ್ಲುಗಳ ಮೇಲೆ ನಾಗರ (ಹಾವಿನ)ಚಿತ್ರಗಳು ಕಾಣುತ್ತವೆ. ದೇವಾಲಯದ ಆವರಣದಲ್ಲಿ ಗಣಪತಿ, ನವಗ್ರಹ, ಮಣ್ಣಿನ ಹುತ್ತ, ಅಶ್ವತ್ಥವೃಕ್ಷ, ನಾಗಪ್ಪನ ಶಿಲೆಗಳು ಇವೆ.

ಬಂಡೆಗಲ್ಲಿನ ಮೇಲೆ ಉದ್ಭವವಾಗಿರುವ ನಾಗಪ್ಪ ದೇವರನ್ನು ಈ ಭಾಗದ ಸುತ್ತಮುತ್ತಲ ಜನರು ಹೆಚ್ಚಾಗಿ ಭಯಭಕ್ತಿಯಿಂದಲೇ ಪೂಜಿಸಿಕೊಂಡು ಬರುತ್ತಿದ್ದಾರೆ. ನಾಗರ ಪಂಚಮಿ, ಗೌರಿ&ಗಣೇಶ ಹಬ್ಬ ಇತರೆ ಹಬ್ಬಗಳ ದಿನಗಳಲ್ಲಿ ವಿಶೇಷವಾಗಿ ದಂಪತಿಗಳು, ಸಹೋದರ&ಸಹೋದರಿಯರು, ಕುಟುಂಬದ ಸದಸ್ಯರೊಡಗೂಡಿ ಪೂಜೆ ಸಲ್ಲಿಸುವುದು ವಾಡಿಕೆ.

ವಿಶೇಷತೆ:

ಸಹೋದರ-ಸಹೋದರಿಯರು ದೇವಾಲಯದಲ್ಲಿ ಪೂಜಿಸಿದರೆ ಅಣ್ಣತಂಗಿ ಬಾಂಧವ್ಯ ಗಟ್ಟಿಯಾಗಿರುತ್ತದೆ ಎಂಬುದು ಇಲ್ಲಿನ ವಿಶೇಷತೆಗಳಲ್ಲೊಂದು. ಅದರಂತೆ ಸಹೋದರ&ಸಹೋದರಿಯರು ನಾಗಪ್ಪ ದೇವರ ಮೇಲಿನ ಸೇವಂತಿಗೆ ಹೂಗಳನ್ನು ಅಣ್ಣ ತಂಗಿ, ಅಕ್ಕ ತಮ್ಮ ಪರಸ್ಪರ ತಮ್ಮ ಕೈಗಳಿಗೆ ಕಟ್ಟಿಕೊಳ್ಳುವ ದೃಶ್ಯಗಳನ್ನು ಗಣೇಶ ಹಬ್ಬದಲ್ಲಿ ಕಾಣಬಹುದಾಗಿದೆ.

ಇಷ್ಟಾರ್ಥ ಸಿದ್ಧಿ

ಉದ್ಭವ ನಾಗಪ್ಪನಿಗೆ ಒಂದು ನಾಣ್ಯವಿಟ್ಟು ಬಳಿಕ ಅದನ್ನು ಒದ್ದೆ ಬಟ್ಟೆಯಲ್ಲಿ ಕಟ್ಟಿ ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥ ನೆರವೇರುತ್ತವೆ ಎಂಬ ನಂಬಿಕೆ ಇದೆ.

ದೇಗುಲದ ಇತಿಹಾಸ

ಬೆಟ್ಟಗುಡ್ಡ ಪ್ರದೇಶದಂತಿದ್ದ ಜಾಗದಲ್ಲಿ ಗುಡ್ಡದ ಪೊಟರೆಯ ಕಲ್ಲಿನ ಮೇಲೆ ಮೇಯಲು ಬಿಟ್ಟ ಹಸು ಹಾಲು ಕರೆದು ಬರುತ್ತಿತ್ತು. ಇದನ್ನು ನೋಡಿದ ಸ್ಥಳಿಯರು ಸ್ಥಳ ಪರಿಶೀಲನೆ ಮಾಡಿದಾಗ ಕಲ್ಲಿನ ಮೇಲೆ ಹಾವಿನ ಆಕಾರ ಉದ್ಭವವಾಗಿರುವುದು ಕಾಣಿಸಿದೆ. ಅಂದಿನಿಂದ ಜನರು ಅಲ್ಲಿ ನಾಗಪ್ಪ ದೇವರಿದ್ದಾನೆ ಎಂದು ಪೂಜಿಸಿ ಬರುತ್ತಿದ್ದಾರೆ. ಮತ್ತೆ ಕೆಲವರು ರಸ್ತೆ ಪಕ್ಕದಲ್ಲಿದ್ದ ಗುಡ್ಡದ ಮೇಲೆ ರಾತ್ರಿವೇಳೆ ನಾಗರಹಾವು ಅಮಾವಾಸ್ಯೆ, ಹುಣ್ಣಿಮೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೆ ಮಧ್ಯರಾತ್ರಿ ವೇಳೆ ಗಂಟೆನಾದ ಕೇಳಿಬರುತ್ತಿತ್ತು. ಇದನ್ನು ಕಂಡವರು ಅಲ್ಲಿ ನಾಗಪ್ಪ ದೇವರು ನೆಲೆಸಿದ್ದಾನೆ ಎಂದು ಪೂಜೆ ನಡೆಸುತ್ತಾ ಬಂದರು ಎಂದು ಹೇಳಲಾಗುತ್ತದೆ.

ಉದ್ಭವನಾಗಪ್ಪ ದೇವರನ್ನು ಮನಸಾರೆ ಸ್ಮರಿಸಿ ಪೂಜಿಸಿದರೆ ಇಷ್ಟಾರ್ಥ ನೆರವೇರುತ್ತದೆ. ಸಮಸ್ಯೆಗಳು ದೂರಾಗುತ್ತವೆ. ಸಹೋದರ ಸಹೋದರಿಯರು ಗಣೇಶ ಹಬ್ಬದಿನದಂದು ಪೂಜಿಸಿದರೆ ಅಣ್ಣತಂಗಿ ಬಾಂಧವ್ಯ ಮತ್ತಷ್ಟು ವೃದ್ಧಿಸುತ್ತದೆ ಎಂಬುದು ಭಕ್ತರ ಅಚಲ ನಂಬಿಕೆೆ. ದೇವಾಲಯದ ಟ್ರಸ್ಟ್​ನಿಂದ ೇತ್ರದಲ್ಲಿ ಸ್ಥಳಿಯರು ಮತ್ತು ಭಕ್ತರ ಸಹಕಾರದಿಂದ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ.  ಸಿ. ನಾಗರಾಜುಅಧ್ಯಕ್ಷ, ಉದ್ಬವನಾಗಪ್ಪ ದೇವಾಲಯ ಅಭಿವೃದ್ಧಿ ಸೇವಾ ಟ್ರಸ್ಟ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net