ತಾಲೂಕು ಕಚೇರಿ ಮುಂದೆ ಸಾರ್ವಜನಿಕರ ಪ್ರತಿಭಟನೆ

IMG-20240711-WA0191
Published on

ಹೊಳೆನರಸೀಪುರ: ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟಡದ ತಡೆಗೋಡೆ ತೆರವುಗೊಳಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟಿಸಿದರು.


ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿರುವ ಸಾರ್ವಜನಿಕ ಸಮುದಾಯ ಭವನದಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗುರುವಾರ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಪಡೆದು ಸಮಸ್ಯೆ ಬಗೆಹರಿಸುತ್ತಿದ್ದರು. ಸ್ಥಳದಲ್ಲಿದ್ದ ನೂರಾರು ಸಾರ್ವಜನಿಕರು ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟಡದ ತಡೆಗೋಡೆ ತೆರವುಗೊಳಿಸುವಂತೆ ಅರ್ಜಿ ನೀಡಿದರು. ಇದಕ್ಕೆ ಪ್ರತಿಕ್ರಿಸಿದ ಜಿಲ್ಲಾಧಿಕಾರಿ ಸತ್ಯಭಾಮಾ ಅವರು, ಇದೆಲ್ಲ ನನಗೆ ಗೊತ್ತಿದೆ. ನನಗೆ ಆರು ತಿಂಗಳು ಸಮಯ ಬೇಕು, ಬಳಿಕ ಕಾನೂನು ರೀತಿಯಲ್ಲಿ ತೆರವುಗೊಳಿಸುವುದಾಗಿ ತಿಳಿಸಿದರು.


ಈ ಹಿಂದೆ ತಾವು ಜನಸ್ಪಂದನ ಕಾರ್ಯಕ್ರಮ ಮಾಡಿದ್ದ ಸಂದರ್ಭದಲ್ಲಿ ಮೂರು ತಿಂಗಳು ಸಮಯ ತೆಗೆದುಕೊಂಡಿದ್ದೀರಿ. ಆದರೆ ಆರು ತಿಂಗಳು ಸಮಯ ಕೇಳುತ್ತಿದ್ದೀರಿ, ಇದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಮತ್ತು ಸಾರ್ವಜನಿಕರ ನಡುವೆ ಮಾತಿಗೆ ಮಾತು ನಡೆದವು. ಇದರಿಂದ ಬೇಸತ್ತ ಸಾರ್ವಜನಿಕರು ಹಾಗೂ ಕೆಲವು ಮುಖಂಡರು ಕಾರ್ಯಕ್ರಮದಿಂದ ಹೊರಬಂದು ಸಾರ್ವಜನಿಕ ಸಮುದಾಯದ ಎದುರು ಪ್ರತಿಭಟನೆಗೆ ಮುಂದಾದರು.
ಪ್ರತಿಭಟಿಸುತ್ತಿದ್ದಂತೆ ತಾಲೂಕು ದಂಡಾಧಿಕಾರಿ ಕೆ.ಕೆ.ಕೃಷ್ಣಮೂರ್ತಿ ಅವರನ್ನು ಸ್ಥಳಕ್ಕೆ ಕಳುಹಿಸಿ ಮನವೊಲಿಸುವಂತೆ ಪ್ರಯತ್ನಿಸಿದರಾದರೂ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸಿದರು.


ಸ್ಥಳದಲ್ಲಿದ್ದ ನಾಗರಿಕರು ಜಿಲ್ಲಾಧಿಕಾರಿಗೆ ತಡೆಗೋಡೆ ತೆರವುಗೊಳಿಸಲು ಧೈರ್ಯವಿಲ್ಲ, ಅವರು ಕಳೆದ ಆರು ಏಳು ತಿಂಗಳು ಅರ್ಜಿ ಕೊಟ್ಟು ಬರುತ್ತಿರುವ ಜನರಿಗೆ ಕಣ್ಣೊರೆಸುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದು ಅಲ್ಲಲ್ಲಿ ಗುಸುಗುಸು ಮಾತನಾಡಿಕೊಳ್ಳುತ್ತಿರುವುದು ಕಂಡುಬಂತು. ಸ್ಥಳದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದಾರೆ. ಜಿಲ್ಲಾಧಿಕಾರಿಗಳು ಒಂದು ಆದೇಶ ಮಾಡಿದರೆ ಈಗಲೇ ತಡೆಗೋಡೆಯನ್ನು ತೆರವುಗೊಳಿಸಬಹುದು, ಅವರು ಪ್ರಭಾವಿ ರಾಜಕಾರಣಿಗಳಿಗೆ ಹೆದರಿ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ನಾಗರಿಕರು ಆಕ್ರೋಶ ಹೊರಹಾಕಿದರು.


ತಡೆಗೋಡೆ ಒಡೆಸಲು ಏಕೆ ಮೀನಮೇಷ ಎಣಿಸುತ್ತಿದ್ದಾರೆ ಎಂಬುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶತಮಾನಗಳಿಂದ ಇದೇ ಹಳೇ ಅಂಚೆ ಕಚೇರಿ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಿಕೊಂಡಿದ್ದಾರೆ. ಈ ಕಟ್ಟಡ ನಿರ್ಮಿಸುವುದಕ್ಕೂ ಮೊದಲು ರಸ್ತೆಯ ಪಕ್ಕದಲ್ಲಿ ತಾಲೂಕು ದಂಡಾಧಿಕಾರಿಗಳ ಕಚೇರಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇದ್ದು, ಶಾಲಾ ಆಟದ ಮೈದಾನವನ್ನೂ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ರಸ್ತೆಯನ್ನು ಮುಚ್ಚಿದ್ದಾರೆ, ಇದು ಯಾವ ನ್ಯಾಯ, ಅಧಿಕಾರಿಗಳಿಗೆ ಇದು ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದರು.


ಸಬೂಬು ಹೇಳಿ ನಿರ್ಗಮಿಸಿದ ಜಿಲ್ಲಾಧಿಕಾರಿ: ಪ್ರತಿಭಟನೆ ಚುರುಕಾಗುತ್ತಿದ್ದಂತೆ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸಬೂಬು ಹೇಳಿ ಕಾರ್ಯಕ್ರಮದಿಂದ ನಿರ್ಗಮಿಸಿದರು. ಜನಸ್ಪಂದನಾ ಕಾರ್ಯಕ್ರಮದಲ್ಲಿ ಜನರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಿಲ್ಲದಿದ್ದರೆ ಅಧಿಕಾರಿಗಳು ಏಕೆ ಇಂತಹ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.


ಜಿಲ್ಲಾಧಿಕಾರಿಗಳಿಗೆ ಇಂತಹ ಕೆಲಸ ಮಾಡಲು ಸಾಧ್ಯವಾಗದಿದ್ದಲ್ಲಿ ಬೇರೆಯವರು ಯಾರು ಮಾಡುತ್ತಾರೆ. ಇವರಿಗೆ ಅಧಿಕಾರವಿದ್ದರೂ ಇದಕ್ಕೂ ನನಗೂ ಸಂಬಂಧವಿಲ್ಲ ಎಂಬಂತೆ ತೆರಳಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ನ್ಯಾಯ ಕೊಡಿಸುವವರೇ ಹೀಗೆ ಮಾಡಿದರೆ ಜನಸಾಮಾನ್ಯರ ಗೋಳು ಕೇಳುವವರು ಯಾರು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.


ಪ್ರತಿಭಟನೆಯಲ್ಲಿ ಬಾಗಿವಾಳು ಮಂಜೇಗೌಡ, ಆರ್‌ಟಿಐ ಕಾರ್ಯಕರ್ತ ಮುತ್ತುರಾಜ್, ಬಸವನಗುಡಿಯ ಬಸವರಾಜ್, ತಾತನಹಳ್ಳಿ ಗ್ರಾಮದ ಹೇಮಂತ್‌ಕುಮಾರ್, ಲುಕ್ಕೂರು ಬಸವರಾಜು, ಉಮೇಶ್ , ಲಕ್ಕೇಗೌಡ, ಪುರಸಭೆ ಸದಸ್ಯ ಮಂಜುನಾಥ್, ಗಿರೀಶ, ಕಾಂಗ್ರೆಸ್ ಕಾರ್ಯಕರ್ತೆ ಹಳೆಕೋಟೆ ಶ್ರುತಿ , ಜಿಲ್ಲಾ ಮಹಿಳಾ ರಕ್ಷಣಾ ವೇದಿಕೆ ಅಧ್ಯಕ್ಷ ಪಾರ್ವತಿ ಹಾಗೂ ನೂರಾರು ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net