

ಕಾಸರಗೋಡು: ಸ್ನೇಹಿತೆ ಮನೆಗೆಂದು ತೆರಳಿದ್ದ ಇಬ್ಬರು ಯುವತಿಯರನ್ನು ಮಾದಕ ವಸ್ತು ಸೇವನೆಗೈದ ಸ್ಥಿತಿಯಲ್ಲಿ ಇಬ್ಬರು ಯುವಕರ ಜತೆ ಕಣ್ಣೂರಿನ ವಸತಿಗೃಹವೊಂದರಲ್ಲಿ ಬಂಧಿಸಲಾಗಿದೆ. ತಳಿಪರಂಬ ಅಬಕಾರಿ ಇನ್ಸ್‌ಪೆಕ್ಟರ್ ಶಿಬಿಲ್‌ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ, ಇರಿಕ್ಕೂರಿನ ರಫೀನ(24), ಕಣ್ಣೂರಿನ ಜಸೀನಾ, ಮಹಮ್ಮದ್ ಶಮ್ನಾದ್ ಹಾಗೂ ಮಹಮ್ಮದ್ ಜಂಶೀರ್ ಎಂಬುವವರನ್ನು ಬಂಧಿಸಿ, ಅವರಿಂದ 490 ಮಿ.ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿಯೊಂದಿಗೆ ಕಣ್ಣೂರಿನ ಪರಶ್ಯಿನಿ ಕೊಳ್‌ಮೊಟ್ಟದ ವಸತಿಗೃಹಕ್ಕೆ ದಾಳಿ ನಡೆಸಿದಾಗ ಇಬ್ಬರು ಯುವಕರ ಜತೆಗೆ ಯುವತಿಯರು ಮಾದಕ ದ್ರವ್ಯ ಸೇವಿಸುತ್ತಿರುವುದು ಖಚಿತವಾಗಿತ್ತು.
ಈದುಲ್‌ಫಿತೃ ದಿವಸ ಇಬ್ಬರೂ ಯುವತಿಯರು ತಮ್ಮ ಸ್ನೇಹಿತೆ ಮನೆಗೆ ತೆರಳುವುದಾಗಿ ಹೊರಟವರು ತಮ್ಮ ಮೊಬೈಲ್ ಅನ್ನು ಪರಸ್ಪರ ಬದಲಾಯಿಸಿ, ಸ್ನೇಹಿತೆ ಮನೆಯಲ್ಲಿರುವುದಾಗಿ ತಿಳಿಸಿ ಮನೆಯವರನ್ನು ಹಾದಿ ತಪ್ಪಿಸುತ್ತಿದ್ದರು. ಇದಕ್ಕೂ ಮೊದಲು ವಿವಿಧೆಡೆ ವಸತಿಗೃಹಗಳಲ್ಲಿ ತಂಗಿದ್ದರೆಂಬ ಬಗ್ಗೆ ಮಾಹಿತಿ ಲಭಿಸಿದೆ.