ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನ

mng-apr5-Dc office meeting
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಣೆಕಟ್ಟುಗಳಲ್ಲಿ ಸದ್ಯ ನೀರಿನ ಸಂಗ್ರಹ ಉತ್ತಮವಾಗಿದ್ದು, ಮಳೆಯೂ ಬರುತ್ತಿರುವುದರಿಂದ ಕುಡಿಯುವ ನೀರಿಗೆ ಅಭಾವ ತಲೆದೋರದಿದ್ದರೂ, ಮುಂದಿನ ಎರಡು ತಿಂಗಳ ಅವಧಿಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಅಧಿಕಾರಿ ವರ್ಗ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನ ನೀಡಿದ್ದಾರೆ.

ಕುಡಿಯುವ ನೀರು, ಬೇಸಿಗೆ ಸಮಸ್ಯೆ ಹಾಗೂ ಮಳೆಗಾಲವನ್ನು ಎದುರಿಸಲು ಅಗತ್ಯ ಸಿದ್ಧತೆಗಳ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ತಿಂಗಳಲ್ಲಿ ನೀರಿನ ನಿರ್ವಹಣೆಗೆ ಅಗತ್ಯ ಕ್ರಮ ವಹಿಸಿದರೆ, ಇರುವ ನೀರನ್ನು ಮುಂದಿನ ಎರಡು ತಿಂಗಳ ಕಾಲ ಸಮರ್ಪಕವಾಗಿ ಪೂರೈಕೆ ಮಾಡಲು ಸಾಧ್ಯವಾಗಲಿದೆ. ಹಾಗಾಗಿ ನೀರಿನ ಸಂಗ್ರಹವಿದೆ, ಮಳೆ ಇದೆ ಎಂಬ ಕಾರಣಕ್ಕೆ ರಿಸ್ಕ್ ತೆಗೆದುಕೊಳ್ಳದೆ, ಕೈಗಾರಿಕೆಗಳಿಗೆ ನೀರು ಪೂರೈಕೆಯಲ್ಲಿಯೂ ಈಗಿನಿಂದಲೇ ನಿಯಂತ್ರಣಕ್ಕೆ ಕ್ರಮ ವಹಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತ ಚರ್ಚೆಯ ವೇಳೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವ ಕಾರಣ ಜಲಮೂಲಗಳಲ್ಲಿ ಬೇಸಿಗೆಯ ನೀರಿನ ಪೂರೈಕೆಗೆ ಅಗತ್ಯ ನೀರಿನ ಸಂಗ್ರಹವಿದೆ. ಫೆಬ್ರವರಿ ಮಾರ್ಚ್‌ನಲ್ಲಿ ಬಿಸಿಗಾಳಿಯ ಕಾರಣ ನೀರಿನ ಆವಿಯ ಪ್ರಮಾಣ ಹೆಚ್ಚಾಗಿದ್ದರೂ, ಈ ನಡುವೆ ಸುರಿದ ಮಳೆಯ ಕಾರಣ ನೀರಿನ ಸಂಗ್ರಹವಿದೆ. ಮುಂಗಾರು ಪೂರ್ವ ಮಳೆಯೂ ಈ ಬಾರಿ ಉತ್ತಮವಾಗಿ ಸುರಿಯುವ ನಿರೀಕ್ಷೆ ಇದೆ. ಮಾತ್ರವಲ್ಲದೆ, ಮೇ ತಿಂಗಳಲ್ಲೇ ಮುಂಗಾರು ಆರಂಭವಾಗುವ ನಿರೀಕ್ಷೆ ಇರುವ ಕಾರಣ ನೀರಿನ ಸಮಸ್ಯೆ ಎದುರಾಗದು ಎಂದರು.

ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಹಾಗೂ ಎಎಂಆರ್ ಅಣೆಕಟ್ಟಿನಲ್ಲಿರುವ ನೀರಿನ ಸಂಗ್ರಹ ಕನಿಷ್ಟ 35ರಿಂದ 40 ದಿನಗಳಿಗೆ ಸಾಕಾಗಲಿದೆ. ಪಾಲಿಕೆ ವ್ಯಾಪ್ತಿಯ ಮೂರು ಅಣೆಕಟ್ಟುಗಳ ನೀರು ಬಳಕೆ ಮಾಡಿದರೆ ಸುಮಾರು 90 ದಿನಗಳವರೆಗೆ ಸಾಕಾಗಲಿದೆ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.

ಎಲ್ಲೆಲ್ಲಿ ಸಮಸ್ಯೆ: ಸೋಮೇಶ್ವರ, ಉಳ್ಳಾಲ, ಕೋಟೆಕಾರು ಪ್ರದೇಶದಲ್ಲಿ ನೀರಿನ ಸಮಸ್ಯೆ ಇದ್ದು, ಪರ್ಯಾಯ ಕ್ರಮ ವಹಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಸುರತ್ಕಲ್‌ನಲ್ಲಿ ನೀರಿನ ಸಮಸ್ಯೆ ಇದ್ದು, 156 ಬೋರ್‌ವೆಲ್‌ಗಳ ವ್ಯವಸ್ಥೆ ಇದೆ. 16 ಟ್ಯಾಂಕರ್‌ಗಳನ್ನು ಕೂಡಾ ನೀರು ಪೂರೈಕೆಗಾಗಿ ಮೀಸಲಿರಿಸಲಾಗಿದೆ. ಬಂಟ್ವಾಳದ ಪಾಣೆಮಂಗಳೂರಿನ ನಾಲ್ಕೈದು ವಾರ್ಡ್‌ಗಳಿಗೆ 2018ರಿಂದ ನೀರಿನ ಸಮಸ್ಯೆ ಇದೆ. ನೀರು ಪೂರೈಕೆ ಜಾಲ ಹೊಸ ಜಾಲಕ್ಕೆ ಸಂಪೂರ್ಣವಾಗಿ ಬದಲಾದ ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ನೇತ್ರಾವತಿಗೆ ಕೊಳಚೆ ನೀರು: ಡಿಪಿಆರ್ ಸಿದ್ಧತೆ

ಬಂಟ್ವಾಳದಲ್ಲಿ ನೇತ್ರಾವತಿ ನದಿಗೆ ಕೊಳಚೆ ನೀರು ಸೇರುತ್ತಿರುವ ವರದಿಗಳ ಬಗ್ಗೆ ಸಭೆಯಲ್ಲಿ ಉಲ್ಲೇಖಿಸಿದ ಸಚಿವ ದಿನೇಶ್ ಗುಂಡೂರಾವ್, ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಅಧಿಕಾರಿಗಳಿಂದ ವಿವರ ಕೇಳಿದರು.

ಬಂಟ್ವಾಳದ ಐದು ಕಡೆ ಒಳಚರಂಡಿ ನೀರು ನದಿಗೆ ಸೇರುತ್ತಿರುವುದು ಪತ್ತೆಯಾಗಿದ್ದು, ಅದನ್ನು ಸರಿಪಡಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ಬಂಟ್ವಾಳ ತಾ.ಪಂ. ಸಿಇಒ ಮಾಹಿತಿ ನೀಡಿದರು.

ನೀರಿನ ಸಮಸ್ಯೆಗೆ ಪಿಡಿಒಗಳೇ ಜವಾಬ್ದಾರಿ

ಪುತ್ತೂರು ಕಬಕದ ಮುರ ಎಂಬಲ್ಲಿ ಕಳೆದ ಮೂರು ದಿನಗಳಿಂದ ನೀರಿಲ್ಲ. ಪಂಪ್ ಹಾಳಾಗಿದ್ದು, ಅದನ್ನು ರಿಪೇರಿಗೆ ತೆಗೆದುಕೊಂಡು ಹೋಗಿದ್ದಾರೆನ್ನಲಾಗಿದೆ. ಆದರೆ ನೀರು ಪೂರೈಕೆಗೆ ಪರ್ಯಾಯ ಕ್ರಮ ವಹಿಸಿಲ್ಲ, ಅಧಿಕಾರಿಗಳಿಗೆ ಸಮಸ್ಯೆ ಎದುರಾದಾಗ ನೀರು ಪೂರೈಕೆಗೆ ಹಣಕಾಸಿನ ತೊಂದರೆ ಏನಾದರೂ ಇದೆಯೇ ಎಂದು ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಪ್ರಶ್ನಿಸಿದರು.

ನೀರಿನ ಪೂರೈಕೆಗೆ ಸಂಬಂಧಿಸಿ ಹಣಕಾಸಿನ ತೊಂದರೆ ಇಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದಾಗ, ಸ್ಥಳೀಯವಾಗಿ ನೀರು ಪೂರೈಕೆಯ ಜವಾಬ್ಧಾರಿಯನ್ನು ಪಿಡಿಒಗಳೇ ನಿರ್ವಹಿಸಬೇಕು. ಸಮಸ್ಯೆ ಆದಾಗ ಪಿಡಿಒಗಳನ್ನೇ ಜವಾಬ್ಧಾರನ್ನಾಗಿಸಬೇಕು ಎಂದು ಹೇಳಿದರು.

ದ.ಕ. ಜಿಪಂ ಸಿಇಒ ಡಾ. ಆನಂದ್, ಎಸ್ಪಿ ಯತೀಶ್ ಎನ್., ಡಿಸಿಎಫ್ ಆ್ಯಂಟನಿ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net