ದುರ್ಗಾಮಾತೆ ಮೂರ್ತಿ ವಿಸರ್ಜನೆ ವೇಳೆ ಯುವಕರಿಬ್ಬರು ನಾಪತ್ತೆ!

Youth Missing
Published on

ಬೆಂಗಳೂರು: ದುರ್ಗಾ ಮಾತೆ ಮೂರ್ತಿ ವಿಸರ್ಜನೆಗೆ ಕೆರೆಗೆ ಇಳಿದ ಇಬ್ಬರು ಯುವಕರು ನಾಪತ್ತೆ ಆಗಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜರಾಜೇಶ್ವರಿನಗರದ ಸೋಮೇಶ್ (21) ಮತ್ತು ಜಿತು (22) ನಾಪತ್ತೆ ಆದವರು.

ಮಹಾರಾಷ್ಟ್ರ ಮೂಲದ ಸೋಮೇಶ್ ಮತ್ತು ಜಿತು ರಾಜರಾಜೇಶ್ವರಿನಗರದಲ್ಲಿ ನೆಲೆಸಿದ್ದರು. ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ದಸರಾ ನಿಮಿತ್ತ ಮನೆಯಲ್ಲಿ ದುರ್ಗಾ ಮಾತೆ ಮೂರ್ತಿ ಕೂರಿಸಿದ್ದರು. ಬುಧವಾರ ಸಂಜೆ 6 ಗಂಟೆಯಲ್ಲಿ ವಿಸರ್ಜನೆ ಮಾಡಲು ಟ್ರ್ಯಾಕ್ಟರ್‌ನಲ್ಲಿ ದುರ್ಗಾ ಮಾತೆ ಮೂರ್ತಿಯನ್ನು ಕೂರಿಸಿಕೊಂಡು ಸೋಮೇಶ್, ಜಿತು ಸೇರಿದಂತೆ 15ಕ್ಕೂ ಅಧಿಕ ಮಂದಿ ಕೆಂಗೇರಿಯ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಇರುವ ಸಾವನ್ ದರ್ಬಾರ್ ಆಶ್ರಮದ ಮುಂಭಾಗದ ಸುಣಕಲ್ ಪಾಳ್ಯ ಕೆರೆಗೆ ಬಂದಿದ್ದಾರೆ.

ಮೂರ್ತಿ ವಿಸರ್ಜನೆ ಮಾಡಲು ಐವರು ಕೆರೆಗೆ ಇಳಿದಿದ್ದು, ಮೂವರು ಮಾತ್ರ ನೀರಿಂದ ಹೊರ ಬಂದಿದ್ದಾರೆ. ಆದರೆ, ಸೋಮೇಶ್ ಮತ್ತು ಜಿತು ಹೊರಬಂದಿಲ್ಲ. ಸ್ನೇಹಿತರು ಮತ್ತು ಆಪ್ತರು ಗಾಬರಿಗೊಂಡು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ರಾತ್ರಿಯಾದ ಕಾರಣ ಕಾರ್ಯಾಚರಣೆ ಅರ್ಧಕ್ಕೆ ಕೈಬಿಟ್ಟು ಗುರುವಾರ ಬೆಳಗ್ಗೆ ಮತ್ತೆ ಶುರು ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net