

ಬನ್ನೂರು: ಪಟ್ಟಣದ ಬಸ್‌ನಿಲ್ದಾಣದ ಸಮೀಪದಲ್ಲಿರುವ ನಂದಿನ ಹಾಲಿನ ಕೇಂದ್ರ ಮತ್ತು ಚಾಟ್ಸ್ ಅಂಗಡಿ ಭಾನುವಾರ ರಾತ್ರಿ ಬೆಂಕಿಗಾಹುತಿಯಾಗಿದೆ.
ನಂದಿನಿ ಬೂತ್ ಹಾಗೂ ಚಾಟ್ಸ್ ಅಂಗಡಿ ಎಂದಿನಂತೆ ಭಾನುವಾರ ರಾತ್ರಿ 10 ಗಂಟೆವರೆಗೂ ತೆರೆದಿತ್ತು. ಬಳಿಕ ಮಾಲೀಕರು ಬಾಗಿಲು ಹಾಕಿಕೊಂಡು ಮನೆಗೆ ತೆರಳಿದ್ದರು. ತಡರಾತ್ರಿ 12 ಗಂಟೆಗೆ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಲೀಕ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ. ಅಲ್ಲದೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಅಷ್ಟರಾಗಲೇ ಅಂಗಡಿಯಲ್ಲಿ ಯಂತ್ರೋಪಕಣ ಹಾಗೂ ವಸ್ತುಗಳು ಸುಟ್ಟುಕರಕಲಾಗಿತ್ತು. ಅಂಗಡಿಯಲ್ಲಿದ್ದ 1 ಗ್ಯಾಸ್ ಸಿಲಿಂಡರ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಅವಘಡ ತಪ್ಪಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಬನ್ನೂರು ಪೊಲೀಸ್ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಎರಡೂ ಅಂಗಡಿಗಳಲ್ಲಿ ಒಂದರಲ್ಲಿ ನಾನು ನಂದಿನಿ ಪಾರ್ಲರ್ ನಡೆಸುತ್ತಿದ್ದು, ಮತ್ತೊಂದನ್ನು ಚಾಟ್ ಸೆಂಟರ್‌ಗೆ ಬಾಡಿಗೆ ನೀಡಿದ್ದೆ. ಭಾನುವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಂಗಡಿಯಲ್ಲಿ ಇಟ್ಟಿದ್ದ 1.25 ಲಕ್ಷ ರೂ., 1 ಲ್ಯಾಪ್‌ಟಾಪ್, ಮೊಬೈಲ್, 4 ಫ್ರಿಡ್ಜ್, 2 ಷೋಕೇಸ್ ಹಾಗೂ ಸುಮಾರು 70 ಸಾವಿರ ಮೌಲ್ಯದ ಹಾಲು, ಮೊಸರು ಹಾಗೂ ದಾಖಲಾತಿಗಳು ಸುಟ್ಟುಕರಲಾಗಿದೆ’ ಎಂದು ಅಂಗಡಿ ಮಾಲೀಕ ಕೇತುಪುರ ಶಿವಕುಮಾರ್ ತಿಳಿಸಿದರು.