ಪೆರೋಲ್​ ಹೆಸರಲ್ಲಿ ಪರಾರಿ?!; ತಲೆಮರೆಸಿಕೊಂಡಿದ್ದಾರೆ ಬೆಳಗಾವಿ ಹಿಂಡಲಗಾ ಜೈಲಿನ ಇಬ್ಬರು ಕೈದಿಗಳು..

Parole
Published on

ಬೆಳಗಾವಿ: ಹಿಂಡಲಗಾ ಜೈಲಿನಿಂದ ಪೆರೋಲ್​ ಹೆಸರಲ್ಲಿ ಹೊರಗೆ ಹೋದ ಇಬ್ಬರು ಕೈದಿಗಳು ತಲೆಮರೆಸಿಕೊಂಡಿದ್ದು, ಅವರಿಬ್ಬರು ಪೆರೋಲ್ ಹೆಸರಿನಲ್ಲಿ ಪರಾರಿ ಆಗಿದ್ದಾರೆಯೇ ಎಂಬ ಶಂಕೆ ಉಂಟಾಗಿದೆ. ಸಜಾಬಂಧಿಗಳಾದ ರಮೇಶ ವೆಂಕಟರವಣಪ್ಪ ಕುರಿ ಹಾಗೂ ಈಶ್ವರಪ್ಪ ಮಲ್ಲಪ್ಪ ವಗ್ಗರ ತಲೆಮರೆಸಿಕೊಂಡಿರುವ ಕೈದಿಗಳು.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹಳಿಹಟ್ಟಿ ಗ್ರಾಮದ ರಮೇಶ ವೆಂಕಟರವಣಪ್ಪ ಕುರಿ ಸರ್ಕಾರದ ಆದೇಶದಂತೆ ಕೋವಿಡ್​-19 ಹಿನ್ನೆಲೆಯಲ್ಲಿ ಮೇ 15ರಿಂದ ಆಗಸ್ಟ್ 16ರ ವರೆಗೆ ಒಟ್ಟು 90 ದಿನಗಳ ಪೆರೋಲ್ ರಜೆ ಮೇಲೆ ಹೋಗಿದ್ದ. ಆಗಸ್ಟ್ 17ರ ಸಂಜೆ 5.30ಕ್ಕೆ ಆತ ಜೈಲಿಗೆ ಮರಳಬೇಕಿದ್ದರೂ ವಾಪಸ್​ ಬಂದಿರಲಿಲ್ಲ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಚಿಕ್ಕನಿಂದಿ ಗ್ರಾಮದ ಈಶ್ವರ ವಗ್ಗರ (57) ಮೇ 15ರಿಂದ ಆಗಸ್ಟ್ 14ರ ವರೆಗೆ 90 ದಿನಗಳ ಕಾಲ ಪೆರೋಲ್ ರಜೆ ಮೇಲೆ ಹೋಗಿದ್ದು, ಆಗಸ್ಟ್ 15ರಂದು ಕಾರಾಗೃಹಕ್ಕೆ ಮರಳಬೇಕಿತ್ತು. ಅದಾಗ್ಯೂ ಆತ ಬಂದಿರಲಿಲ್ಲ.

ಹೀಗೆ ಪೆರೋಲ್ ಮೇಲೆ ಹೊರ ಹೋಗಿರುವ ಈ ಇಬ್ಬರು ವಾಪಸ್ ಬರದೆ ತಲೆಮರೆಸಿಕೊಂಡಿರುವ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಕೈದಿಗಳ ಕುರಿತು ಸುಳಿವು ಸಿಕ್ಕಲ್ಲಿ ಮಾಹಿತಿ ತಿಳಿಸುವಂತೆ ಪೊಲೀಸರು ಕೋರಿಕೊಂಡಿದ್ದಾರೆ. ಮಾಹಿತಿ ನೀಡುವವರು 9480804031 ಸಂಖ್ಯೆಗೆ ಕರೆ ಮಾಡುವಂತೆ ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net