

ಕುಂದಾಪುರ: ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಬಂದ ಯುವಕರಿಬ್ಬರು ಶನಿವಾರ ಬೆಳಗ್ಗೆ ಕುಂದಾಪುರ ಸಮೀಪದ ಬೀಜಾಡಿ ಬೀಚ್‌ನಲ್ಲಿ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರು ದಾಸರಹಳ್ಳಿ ಮೂಲದ ಸಂತೋಷ್(25) ಮತ್ತು ಕುಂದಾಪುರ ಮೂಲದ ಅಜಯ್(25) ಮೃತರು.
ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆ ನಾಲ್ವರು ಸ್ನೇಹಿತರು ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದು ಬೀಜಾಡಿ ಬೀಚ್ ಪಕ್ಕದ ರೆಸಾರ್ಟ್‌ವೊಂದರಲ್ಲಿ ಉಳಿದುಕೊಂಡಿದ್ದರು. ಶನಿವಾರ ಬೆಳಗ್ಗೆ ಮೂವರು ಸಮುದ್ರದಲ್ಲಿ ಈಜಲು ತೆರಳಿದ್ದು, ಬೆಂಗಳೂರು ಮೂಲದ ಮೋಕ್ಷಿತ್ ಮುಂದೆ ಹೋಗದಂತೆ ಗೋಗರೆದರೂ ಕೇಳದೆ ನೀರಿನಲ್ಲಿ ಮುಂದೆ ಸಾಗಿರುವ ಸಂತೋಷ್ ಹಾಗೂ ಅಜಯ್ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಯುವಕರನ್ನು ಮೋಕ್ಷಿತ್ ರಕ್ಷಿಸಲು ಮುಂದಾಗಿದ್ದು, ಸಂತೋಷ್ ಅವರನ್ನು ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಕುಂದಾಪುರ ಮೂಲದ ಅಜಯ್ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದು, ಸ್ಥಳೀಯರು, ಅಗ್ನಿಶಾಮಕ ದಳ, ಮುಳುಗು ತಜ್ಞರ ತಂಡ ಹಾಗೂ ಕರಾವಳಿ ಕಾವಲು ಪೊಲೀಸ್ ಶೋಧ ನಡೆಸಿ ಮೃತದೇಹಪತ್ತೆ ಹಚ್ಚಿದ್ದಾರೆ.