ವಿಜಯವಾಣಿ ಸುದ್ದಿಜಾಲ ಮಂಚೇನಹಳ್ಳಿ
ತಾಲೂಕಿನ ಕನಗಾನಕೊಪ್ಪ ಬಳಿ ಅತಿ ವೇಗದ ಚಾಲನೆಯ ವೇಳೆ ನಿಯಂತ್ರಣ ತಪ್ಪಿ, ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ, ಸ್ಥಳದಲ್ಲಿಯೇ ಇಬ್ಬರು ಸವಾರರು ಮೃತಪಟ್ಟಿದ್ದಾರೆ.
ಮಂಚೇನಹಳ್ಳಿ ನಿವಾಸಿ ಅಸ್ಗರ್ (28) ಹಾಗೂ ಹೊನ್ನಪ್ಪನಹಳ್ಳಿ ಓಬಳೇಶ್(40) ಮೃತರು. ಶನಿವಾರ ಮಧ್ಯಾಹ್ನ ಮಂಚೇನಹಳ್ಳಿ ಕಡೆಯಿಂದ ಹೋಗುತ್ತಿದ್ದ ದ್ವಿಚಕ್ರ ವಾಹನವು ಚಿಕ್ಕಬಳ್ಳಾಪುರ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ವಾಹನ ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಂಚೇನಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಸ್ತೆಯ ಮಧ್ಯೆ ಮೃತದೇಹಗಳು
ಮಂಚೇನಹಳ್ಳಿ ಹಾಗೂ ಚಿಕ್ಕಬಳ್ಳಾಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿಯು ಕಣಿವೆ, ಅಪಾಯಕಾರಿ ತಿರುವುಗಳನ್ನು ಹೊಂದಿದೆ. ಇಲ್ಲಿ ವಾಹನಗಳು ವೇಗವಾಗಿಯೇ ವಾಹನಗಳು ಸಂಚರಿಸುತ್ತಿದ್ದು, ನಿರಂತರವಾಗಿ ಅಪಘಾತಗಳು ವರದಿಯಾಗುತ್ತಿವೆ. ಇದರ ನಡುವೆ ಶನಿವಾರ ಮಧ್ಯಾಹ್ನ ಎರಡು ದ್ವಿಚಕ್ರ ವಾಹನಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಬೈಕುಗಳು ರಭಸವಾಗಿ ದೂರ ಹೋಗಿ ಬಿದ್ದಿದ್ದು, ನುಜ್ಜುಗುಜ್ಜಾಗಿವೆ. ತಲೆಗೆ ಗಂಭೀರ ಪೆಟ್ಟು ಬಿದ್ದು ಅಸ್ಗರ್ ಹಾಗೂ ಓಬಳೇಶ್ ರಸ್ತೆಯ ಮಧ್ಯೆಯೇ ಮೃತಪಟ್ಟಿದ್ದಾರೆ.